

ನರಗುಂದ: ಮಹದಾಯಿ ಯೋಜನೆಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. 2022ರೊಳಗೆ ಉತ್ತರ ಕರ್ನಾಟಕ ರೈತರ ಜಮೀನಿಗೆ ನೀರು ದೊರೆಯುವಂತೆ ಹೋರಾಟ ಮಾಡಲಾಗುವುದು ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಹೇಳಿದರು.
ಪಟ್ಟಣದ ನಗೀನಾ ಮಸೀದಿ ಆವರಣದಲ್ಲಿ ಅಂಜುಮನ್ ಎ-ಇಸ್ಲಾಂ ಕಮಿಟಿಯಿಂದ ಮಹದಾಯಿ ಹೋರಾಟಗಾರರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಮಹದಾಯಿ ನಿರಂತರ ಹೋರಾಟಕ್ಕೆ ಎಲ್ಲ ಧರ್ಮಗಳ 1300ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ. ಇದುವರೆಗೆ 12 ರೈತರು ಪ್ರಾಣ ಸಮರ್ಪಿಸಿದ್ದಾರೆ. ಹೋರಾಟ ವೇದಿಕೆಯಲ್ಲಿ ಕೆಲವು ದುಷ್ಕರ್ವಿುಗಳು ಥಳಿಸಿದ್ದರಿಂದ ನನ್ನದೊಂದು ಕಣ್ಣು ಕಳೆದುಕೊಂಡಿದ್ದೇನೆ. ಈ ಮಹತ್ವದ ಯೋಜನೆಯ ಹೋರಾಟದಲ್ಲಿ ನಾನು ಜೈಲು ಸೇರಿದರೂ ಆಶ್ಚರ್ಯಪಡಬೇಕಾಗಿಲ್ಲ. ಆದರೆ, ಈ ಹೋರಾಟ ಎಂದಿಗೂ ಅಚಲವಾಗಿರುತ್ತದೆ. ಮಹದಾಯಿ ಯೋಜನೆ ಜಾರಿಯಾದರೆ ರೈತರ, ಬಡವರ, ಸಾಮಾನ್ಯ ವರ್ಗದವರ ಕಷ್ಟಗಳಿಗೆ ಮುಕ್ತಿ ದೊರೆಯಲಿದೆ. ಯೋಜನೆಯ ಹೆಚ್ಚುವರಿ ನೀರಿಗೆ ಸುಪ್ರೀಂ ಕೋರ್ಟ್ನಲ್ಲಿ ಕಳೆದ ತಿಂಗಳು ಅರ್ಜಿ ಸಲ್ಲಿಸಲಾಗಿದೆ. ಆರು ತಿಂಗಳೊಳಗೆ ವಿಚಾರಣೆ ನಡೆದು ಕರ್ನಾಟಕಕ್ಕೆ ಮತ್ತೆ ನ್ಯಾಯ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತ ಮುಖಂಡ ರಾಘವೇಂದ್ರ ಗುಜಮಾಗಡಿ, ಡಿ.ಎಂ. ನಾಯ್ಕರ, ಅಂಜುಮನ್ ಇಸ್ಲಾಂ ಕಮಿಟಿ ತಾಲೂಕಾಧ್ಯಕ್ಷ ಸಿಕಂದರ ಪಠಾಣ ಮಾತನಾಡಿದರು. ಹಾಫೀಜ್ ಇಬ್ರಾಹಿಂ, ಮಹಮ್ಮದ ನಾಯ್ಕರ್, ಇತರರಿದ್ದರು. ಮಹಮ್ಮದ್ ಯೂಸೂಫ್ ಪಾಣಿಗಟ್ಟಿ ಅವರು ಕುರಾನ್, ಮಹೇಶ್ವರಯ್ಯ ಹಾರೋಗೇರಿಮಠ ಸಂಸ್ಕೃತ ಹಾಗೂ ಸ್ಯಾಮುವೆಲ್ ಅವರು ಬೈಬಲ್ ಪಠಣ ಮಾಡಿದರು. ಮುರಾರ್ಜಿ ಶಾಲೆ ಶಿಕ್ಷಕ ಎಂ.ಕೆ. ಅಲ್ಲಿಬಾಯಿ, ಹಜ್ಜು ಮುಲ್ಲಾ ನಿರ್ವಹಿಸಿದರು.