2022ರ ಹಾಸನದ ಹಿನ್ನೋಟ!?...

2022ರ ಹಾಸನದ ಹಿನ್ನೋಟ!?...
Published on

ಹಾಸನ: 2022 ರ ಆರಂಭದಲ್ಲೂ ಕೊರೊನಾ ಮಹಾಮಾರಿ ಕೊನೆಯಾಗಿರಲಿಲ್ಲ. ಮೊದಲ ಎರಡು ತಿಂಗಳುಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿತ್ತು. ಜನರೊಂದಿಗೆ ಹಿಮ್ಸ್ ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಮತ್ತು ವಿದ್ಯಾರ್ಥಿಗಳು ಸಹ ಕೊರೊನಾ ಸೋಂಕಿನಿಂದ ನರಳಿದರು. ಕೊರೊನಾ ಪಾಸಿಟಿವಿಟಿ ದರ ರಾಜ್ಯದಲ್ಲೇ ಹಾಸನ ಮೊದಲ ಸ್ಥಾನಕ್ಕೆ ಅಂದರೆ ಶೇ.32.93 ಕ್ಕೆ ಏರಿಕೆ ಆಗಿತ್ತು.


ಎತ್ತಿನಹೊಳೆ ಯೋಜನೆ ಕಾಮಗಾರಿ ಈ ವರ್ಷವೂ ಬಿರುಸು ಪಡೆಯಲಿಲ್ಲ. ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಆಸೆ ಈ ವರ್ಷವೂ ಈಡೇರಲಿಲ್ಲ. ರಾಜಕೀಯ ಕೆಸರೆರೆಚಾಟ ಮುಂದುವರಿಯಿತು. ಕೊಲೆ ಸುಲಿಗೆ ಪ್ರಕರಣಗಳು ಹೆಚ್ಚಾಗಿಯೇ ನಡೆದವು. ಕಳ್ಳತನ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿತ್ತು. ಆನೆ-ಮಾನವ ಸಂಘರ್ಷ ತೀರ್ವಗೊಂಡ ವರ್ಷ ಇದು.


ರಾಷ್ಟ್ರೀಯ ಹಾಕಿ ಅಂಗಳಕ್ಕೆ ಜಿಲ್ಲೆಯ ಐವರು ಬಾಲಕಿಯರು ಪ್ರವೇಶ ಪಡೆದಿದ್ದು, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಿಮ್ಸ್‌ಗೆ ಹಲವು ಪ್ರಶಸ್ತಿಗಳ ಗರಿ, ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಎಚ್.ಡಿ. ರೇವಣ್ಣ ದಂಪತಿಗೆ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರೀತಂಗೌಡ ಆಹ್ವಾನ ನೀಡಿದ್ದು ರಾಜ್ಯಮಟ್ಟದಲಿ ದೊಡ್ಡ ಸುದ್ದಿಯಾಗಿದ್ದು ಗತಿಸುತ್ತಿರುವ ವರ್ಷದ ವಿಶೇಷ.

ಹಾಸನ: 2022 ರ ಆರಂಭದಲ್ಲೂ ಕೊರೊನಾ ಮಹಾಮಾರಿ ಕೊನೆಯಾಗಿರಲಿಲ್ಲ. ಮೊದಲ ಎರಡು ತಿಂಗಳುಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿತ್ತು. ಜನರೊಂದಿಗೆ ಹಿಮ್ಸ್ ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಮತ್ತು ವಿದ್ಯಾರ್ಥಿಗಳು ಸಹ ಕೊರೊನಾ ಸೋಂಕಿನಿಂದ ನರಳಿದರು. ಕೊರೊನಾ ಪಾಸಿಟಿವಿಟಿ ದರ ರಾಜ್ಯದಲ್ಲೇ ಹಾಸನ ಮೊದಲ ಸ್ಥಾನಕ್ಕೆ ಅಂದರೆ ಶೇ.32.93 ಕ್ಕೆ ಏರಿಕೆ ಆಗಿತ್ತು.
ಎತ್ತಿನಹೊಳೆ ಯೋಜನೆ ಕಾಮಗಾರಿ ಈ ವರ್ಷವೂ ಬಿರುಸು ಪಡೆಯಲಿಲ್ಲ. ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಆಸೆ ಈ ವರ್ಷವೂ ಈಡೇರಲಿಲ್ಲ. ರಾಜಕೀಯ ಕೆಸರೆರೆಚಾಟ ಮುಂದುವರಿಯಿತು. ಕೊಲೆ ಸುಲಿಗೆ ಪ್ರಕರಣಗಳು ಹೆಚ್ಚಾಗಿಯೇ ನಡೆದವು. ಕಳ್ಳತನ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿತ್ತು. ಆನೆ-ಮಾನವ ಸಂಘರ್ಷ ತೀರ್ವಗೊಂಡ ವರ್ಷ ಇದು.
ರಾಷ್ಟ್ರೀಯ ಹಾಕಿ ಅಂಗಳಕ್ಕೆ ಜಿಲ್ಲೆಯ ಐವರು ಬಾಲಕಿಯರು ಪ್ರವೇಶ ಪಡೆದಿದ್ದು, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಿಮ್ಸ್‌ಗೆ ಹಲವು ಪ್ರಶಸ್ತಿಗಳ ಗರಿ, ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಎಚ್.ಡಿ. ರೇವಣ್ಣ ದಂಪತಿಗೆ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರೀತಂಗೌಡ ಆಹ್ವಾನ ನೀಡಿದ್ದು ರಾಜ್ಯಮಟ್ಟದಲಿ ದೊಡ್ಡ ಸುದ್ದಿಯಾಗಿದ್ದು ಗತಿಸುತ್ತಿರುವ ವರ್ಷದ ವಿಶೇಷ.

ಹಿಜಾಬ್ ವಿವಾದ:
ಹಾಸನ ಜಿಲ್ಲೆಯಲ್ಲೂ ಹಿಜಾಬ್ ವಿವಾದ ಸದ್ದು ಮಾಡಿತು. ಜಿಲ್ಲೆಯ ಹಾಸನ, ಅರಸೀಕೆರೆ, ಬೇಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಹಿಜಾಬ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಹಾರಾಜ ಪಾರ್ಕ್‌ನಲ್ಲಿ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ವಿರೋಧ, ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದು ಈ ವರ್ಷದ ನೆನಪನ್ನು ಕೆದಕುವ ಬೆಳವಣಿಗೆಗಳು.

ವಿಮಾನ ನಿಲ್ದಾಣ ಕಾಮಗಾರಿ ಆರಂಭ:
ದಶಕಗಳಿಂದ ನನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಕಾಮಗಾರಿ ಹಾಸನದ ಹೊರವಲಯ ಬೂವನಹಳ್ಳಿಯಲ್ಲಿ ಆರಂಭವಾಗಿದ್ದು, ಈ ವರ್ಷ ದಾಖಲಿಸಬೇಕಾದ ಪ್ರಮುಖ ಘಟನೆಗಳಲ್ಲಿ ಒಂದು. ಮೂಲ ಯೋಜನೆಯಂತೆಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕಡಿಮೆ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣ ಮಾಡಲಾಗುತ್ತಿದೆ ಎಂಬುದಾಗಿ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಸತತ ಆರೋಪ ಮಾಡುತ್ತಿದ್ದರೂ ಸಣ್ಣದೋ, ದೊಡ್ಡದೋ ಒಟ್ಟಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆಯಲ್ಲಾ ಎಂಬುದು ಜಿಲ್ಲೆಯ ನಾಗರಿಕರಿಗೆ ಸಮಾಧಾನ ತಂದ ವರ್ಷ ಇದಾಗಿದೆ.

ಯುನೆಸ್ಕೊ ಪಟ್ಟಿಗೆ ಬೇಲೂರು-ಹಳೇಬೀಡು:
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಜಿಲ್ಲೆಯ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಾದ ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ಸೇರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಈ ವರ್ಷದಲ್ಲಿ. ಈಗಾಗಲೇ ಈ ನಿಟ್ಟಿನಲ್ಲಿ ಯುನೆಸ್ಕೊ ತಂಡ ಸೆಪ್ಟೆಂಬರ್ ತಿಂಗಳಲ್ಲಿ ಬೇಲೂರು ಮತ್ತು ಹಳೇಬೀಡು ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದೆ. ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಿ, ಮತ್ತಷ್ಟು ಉದ್ಯೋಗ ಸೃಷ್ಟಿ ಆಗಲಿವೆ ಎಂಬುದು ಜಿಲ್ಲೆಯ ಯುವಜನರ ನಿರೀಕ್ಷೆ ಆಗಿದೆ.

ಅರಸೀಕೆರೆಯಲ್ಲಿ ಶಿವಲಿಂಗೇಗೌಡರ ಸಂಕಷ್ಟ:
ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆ ಆಗಿ ಹ್ಯಾಟ್ರಿಕ್ ಸಾಧಿಸಿ, ಯಶಸ್ಸಿನ ಉತ್ತುಂಗದಲ್ಲಿ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಸಂಕಷ್ಟ ತಂದ ವರ್ಷ ಇದು. ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿರುವ ಶಿವಲಿಂಗೇಗೌಡರಿಗೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್.ಆರ್. ಸಂತೋಷ್ ನಿದ್ದೆಗೆಡಿಸುತ್ತಿದ್ದಾರೆ. ಸಂತೋಷ್ ನಡೆಸುತ್ತಿರುವ ಅಬ್ಬರದ ಸಮಾವೇಶಗಳು, ಮತದಾರರನ್ನು ಸೆಳೆಯಲು ನೀಡುತ್ತಿರುವ ಉಡುಗೊರೆಗಳು ಎದುರಾಳಿಯೇ ಇಲ್ಲವೆಂದು ಬೀಗುತ್ತಿದ್ದ ಶಿವಲಿಂಗೇಗೌಡರಿಗೆ ಸಂಕಷ್ಟ ತಂದೊಡ್ಡಿವೆ.

ಕಾಡಾನೆ ದಾಳಿಗೆ 8 ತಿಂಗಳಲ್ಲಿ 10 ಬಲಿ:
ಜಿಲ್ಲೆಯಲ್ಲಿ ಈ ವರ್ಷ ಆನೆ-ಮಾನವ ಸಂಘರ್ಷ ತೀವ್ರ ಸ್ವರೂಪ ಪಡೆಯಿತು. ಕಾಡಾನೆ ದಾಳಿಯಿಂದ ಈ ವರ್ಷ ಕೇವಲ 8 ತಿಂಗಳ ಅವಧಿಯಲ್ಲಿ 10 ಮಂದಿ ಬಲಿ ಆಗಿದ್ದಾರೆ. ಲಕ್ಷಾಂತರ ರೂ. ಬೆಳೆ ನಷ್ಟ ಉಂಟಾಗಿದೆ. ಆನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಯಲು ರೈಲುಕಂಬಿಗಳ ತಡೆಗೋಡೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಹಾಸನ ಸೇರಿದಂತೆ ಮೂರು ಜಿಲ್ಲೆಗಳ ವ್ಯಾಪ್ತಿಗೆ 100 ಕೋಟಿ ರೂ. ಬಿಡುಗಡೆ ಮಾಡಿದೆ. ಕಾಮಗಾರಿಯೂ ನಡೆಯುತ್ತಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.
ರೈತರ ಒತ್ತಾಯಕ್ಕೆ ಮಣಿದು ಸರ್ಕಾರ ಇತ್ತೀಚೆಗೆ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಆನೆ ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದೆ. ಆದರೆ ಸಿಬಂದಿ, ವಾಹನ ಸೌಲಭ್ಯ, ಶಸ್ತ್ರಾಸ್ತ್ರ, ಸಲಕರಣೆಗಳನ್ನು ಒದಗಿಸದ ಕಾರಣ ಕಾರ್ಯಪಡೆ ಇನ್ನೂ ಕಾರ್ಯಾರಂಭ ಮಾಡಿಲ್ಲ.

ನಗರಸಭೆ ಸದಸ್ಯನ ಕೊಲೆ:
ಹಾಸನ ನಗರಸಭೆಯ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್ ಭೀಕರ ಹತ್ಯೆ ಈ ವರ್ಷದ ದುರ್ಘಟನೆಗಳಲ್ಲಿ ಒಂದು. ಈ ಘಟನೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಆರೋಪ - ಪ್ರತ್ಯಾರೋಪಕ್ಕೆ ಕಾರಣವಾಯಿತಾದರೂ ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿರುವ ವಿಷಯ ತನಿಖೆ ನಂತರ ಬಹಿರಂಗವಾದ ಕಾರಣ ಎರಡೂ ಪಕ್ಷಗಳ ಮುಖಂಡರು ತಣ್ಣಗಾದರು.

ವರ್ಷಾಘಾತ:
2022 ವಿಪರೀತ ಮಳೆಯ ಕಾರಣಕ್ಕೂ ಜಿಲ್ಲೆ ನೆನಪಿಡಬೇಕಾದ ವರ್ಷವಾಗಿದೆ. ಹುಚ್ಚು ಹಿಡಿದಂತೆ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಕೊಟ್ಯಂತರ ರೂ. ಬೆಳೆ ಹಾನಿ ಸಂಭವಿಸಿತು. ರಸ್ತೆ ಮತ್ತು ಸೇತುವೆಗಳು ಕೊಚ್ಚಿ ಹೋದವು, ನೂರಾರು ಮನೆಗಳು ಕುಸಿದು ಬಿದ್ದವು. ಕೆರೆಕಟ್ಟೆಗಳು ಕೋಡಿ ಬಿದ್ದವು. ಹತ್ತಾರು ಕೆರೆಗಳ ಏರಿ ಒಡೆದು ಅಪಾರ ನಷ್ಟ ಉಂಟಾಯಿತು. ಚನ್ನರಾಯಪಟ್ಟಣ ತಾಲೂಕಿನಲ್ಲಿ ಛಾವಣಿ ಕುಸಿದು ಬಾಲಕೊಬ್ಬ ಮಲಗಿದ್ದಲ್ಲೇ ಮೃತಪಟ್ಟಿದ್ದು, ಮರೆಯಲಾಗದ ದುರಂತಗಳಲ್ಲಿ ಒಂದು.

ಬೇಲೂರಿನಲ್ಲಿ ರಂಭಾಪುರಿ ಶ್ರೆಗಳ ದಸರಾ ದರ್ಬಾರ್:
ವರ್ಷಕ್ಕೊಂದು ಜಿಲ್ಲೆಯಲ್ಲಿ ನಡೆಯುವ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಶಿವಾಚಾರರ್ಯ ಸ್ವಾಮೀಜಿಯವರು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಈ ಬಾರಿ ಜಿಲ್ಲೆಯ ಬೇಲೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಧರ್ಮ ಸಮ್ಮೇಳನದ ನೆನಪಿಗಾಗಿ ‘ವಿಜಯವಾಣಿ’ ಪತ್ರಿಕೆಯು ಸಮೃದ್ಧ ಮಾಹಿತಿ ಹೊಂದಿದ್ದ ವಿಶೇಷ ಪುರವಣಿ ಹೊರತಂದಿದ್ದು ವಿಶೇಷ.

ಹಾಸನಾಂಬೆ ದರ್ಶನೋತ್ಸವ:
ಸತತ ಎರಡು ವರ್ಷಗಳ ಕೊರೊನಾ ಬಿಕ್ಕಟ್ಟಿನ ನಂತರ ಈ ವರ್ಷ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಲಕ್ಷಾಂತರ ಭಕ್ತರು ಸಾಗರದಂತೆ ಆಗಮಿಸಿ ದೇವಿಯ ದರ್ಶನ ಪಡೆದರು. ಎಲ್ಲ ರೀತಿಯ ವ್ಯವಸ್ಥೆಗಳ ನಡುವೆಯೂ ದರ್ಶನೋತ್ಸವದ ಕೊನೆಯ ದಿನಗಳಲ್ಲಿ ಭಕ್ತರ ನೂಕುನುಗ್ಗಲು ಉಂಟಾಗಿ ಗೊಂದಲ ಸೃಷ್ಟಿ ಆಯಿತು. ಮೈಸೂರು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ತಮ್ಮ ಬೆಂಬಲಿಗರೊಂದಿಗೆ ದರ್ಶನಕ್ಕೆ ಬಂದು ಅವಕಾಶ ಸಿಗದೆ ಸ್ಥಳೀಯ ಬಿಜೆಪಿ ಶಾಸಕ ಪ್ರೀತಮ್‌ಗೌಡ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಮರುದಿನ ಮತ್ತೆ ಆಗಮಿಸಿ ಸಮಾಧಾನ ಪಡಿಸಿದ್ದು ಎಲ್ಲ ನಡೆಯಿತು.

9 ಜನರ ದುರ್ಮರಣ:
ಅರಸೀಕೆರೆ ತಾಲೂಕು ಬಾಣಾವರ ಅ.15 ರಂದು ರಾತ್ರಿ ನಡೆದ ಸರಣಿ ಅಪಘಾತದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ 9 ಮಂದಿ ದುರ್ಮರಣ ಅಪ್ಪಿದ್ದು, ಈ ವರ್ಷದ ಘೋರ ದುರಂತಗಳಲ್ಲಿ ಒಂದು. ಸಾಂತ್ವನ ಹೇಳಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರೇ ಅಲ್ಲಿನ ದೃಶ್ಯ ನೋಡಲಾಗದೆ ಕಣ್ಣೀರು ಹಾಕಿದ್ದರು.

ವರ್ಷದ ಕೊನೆಯ ದುರಂತ:
ತನ್ನ ಪ್ರೇಮದ ಬಲೆಗೆ ಬೀಳಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ಅನೂಪ್ ಕುಮಾರ್ ಎಂಬಾತ ಹಾಸನದ ವಿವಾಹ ವಿಚ್ಛೇದಿತ ಮಹಿಳೆಯೊಬ್ಬರನ್ನು ಕೊಲ್ಲಲು ಮಿಕ್ಸರ್ ಗ್ರೈಂಡರ್‌ನಲ್ಲಿ ಡಿಟೊನೇಟರ್ ಇಟ್ಟು ಕೊರಿಯರ್ ಮೂಲಕ ಪಾರ್ಸೆಲ್ ಕಳುಹಿಸಿದ್ದು, ಆ ಪಾರ್ಸೆಲ್ ಅನ್ನು ಮಹಿಳೆಯು ತನಗೆ ಬೇಡ ಎಂದು ಕೊರಿಯರ್ ಅಂಗಡಿಗೆ ಹಿಂದಿರುಗಿಸಿದಾಗ, ಅದನ್ನು ಪರೀಕ್ಷಿಸಲು ಹೋದಾಗ ಸ್ಫೋಟಗೊಂಡು ಕೊರಿಯರ್ ಅಂಗಡಿ ಮಾಲೀಕ ಶಶಿಕುಮಾರ್ ಗಾಯಗೊಂಡು ಆಸ್ಪತ್ರೆ ಸೇರಿರುವುದು ಈ ವರ್ಷದ ಕೊನೆ ಡಿ.26 ರಂದು ನಡೆದ ದುರಂತ ಪ್ರಕರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net