

ಬೆಂಗಳೂರು: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕಲು 201.41 ಕೋಟಿ ರೂ.ರ್ಖಚಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ವಿಧಾನಪರಿಷತ್ತಿಗೆ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಿ.ಟಿ.ರವಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2018ರಿಂದ 2025ರ ಫೆಬ್ರವರಿವರೆಗೆ ಅಧಿಕಾರಿಗಳು ಸೇರಿ ಸಿಬ್ಬಂದಿ ವೇತನಕ್ಕೆ 150.28 ಕೋಟಿ ರೂ ಹಾಗೂ 2008ರಿಂದ 2025ರ ಮಾರ್ಚ್ವರೆಗೆ ವೇತನೇತರಕ್ಕೆ 51.13 ಕೋಟಿ ರೂ.ಸೇರಿ ಒಟ್ಟು 201.41 ಕೋಟಿ ರೂ.ವ್ಯಯವಾಗಿದೆ. ನಕ್ಸಲ್ ಶರಣಾಗತಿ ಮತ್ತು ಪುನವರ್ಸತಿ ಯೋಜನೆಯಡಿ ಈವರೆಗೆ 22 ನಕ್ಸಲರ್ ಶರಣಾಗತಿಯಾಗಿದ್ದಾರೆ ಎಂದರು.
ಕರ್ನಾಟಕವನ್ನು "ನಕ್ಸಲ್ ಮುಕ್ತ ರಾಜ್ಯವನ್ನಾಗಿ' ನಮ್ಮ ಸರ್ಕಾರ ಘೋಷಿಸಿದೆ. ಆದರೂ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ತುಮಕೂರು ಅರಣ್ಯ ಪ್ರದೇಶಗಳ ಮೇಲೆ ನಕ್ಸಲ್ ನಿಗ್ರಹ ಪಡೆಯ ಗುಪ್ತ ಮಾಹಿತಿ ತಂಡವು ತಳಮಟ್ಟದಿಂದ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಸಚಿವರು ಹೇಳಿದರು.
ರಾಜ್ಯವನ್ನು ನಕ್ಸಲ್ರ ಸ್ಲೀಪರ್ ಸೆಲ್ ಆಗದಂತೆ ಕ್ರಮಕೈಗೊಳ್ಳಬೇಕು ಹಾಗೂ ಅರ್ಬನ್ ನಕ್ಸಲ್ರ ಮೇಲೆಯೂ ನಿಗಾವಹಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ ಸಿ.ಟಿ.ರವಿ, ರಾಜ್ಯದಲ್ಲಿ ನಕ್ಸಲ್ರಿಂದ ಎಷ್ಟು ಸಾರ್ವಜನಿಕರು, ಪೊಲೀಸರು,ಅಧಿಕಾರಿಗಳು ಬಲಿಯಾಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಚಿವರನ್ನು ಕೇಳಿದರು. ಈ ಮಾಹಿತಿಯನ್ನು ನಂತರ ಒದಗಿಸುವುದಾಗಿ ಸಚಿವರು ಭರವಸೆ ನೀಡಿದರು.