200ಕ್ಕೂ ಹೆಚ್ಚು ಭ್ರೂಣ ಲಿಂಗ ಪರೀಕ್ಷೆ !

mysore
Published on

ಮೈಸೂರು: ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖಾ ಸಂದರ್ಭದಲ್ಲಿ 200 ಹೆಚ್ಚು ಭ್ರೂಣ ಲಿಂಗ ಪರೀಕ್ಷೆ ನಡೆಸಲಾಗಿದೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.

ನಗರದ ಬನ್ನೂರು ರಸ್ತೆಯ ಹಾರೋಹಳ್ಳಿ ಮತ್ತು ಹುನುಗನಹಳ್ಳಿ ನಡುವೆ ಬರುವ ಐಷಾರಾಮಿ ಮನೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿ ಹತ್ಯೆ ಮಾಡುವ ದುಷ್ಕೃತ್ಯ ಕುರಿತು ಮಾಹಿತಿ ಅರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಅವರ ದೂರು ಆಧರಿಸಿ ವರುಣ ಪೊಲೀಸ್ ಠಾಣೆಯಲ್ಲಿ ಪಿಸಿಪಿಎನ್‌ಡಿಟಿ, ಕೆಪಿಎಂಐಎ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಬಿರುಸುಗೊಂಡಿದೆ.

ಭ್ರೂಣ ಲಿಂಗ ಪತ್ತೆ ದಂಧೆ ನಡೆಸುತ್ತಿದ್ದ ನರ್ಸ್ ಶ್ಯಾಮಲಾ, ಈಕೆಯ ಸಹೋದರ ಗೋವಿಂದರಾಜ್, ಭ್ರೂಣಲಿಂಗ ಪತ್ತೆಗಾಗಿ ಆಗಮಿಸಿದ್ದ ಮಹಿಳೆಯರ ಪತಿಯರಾದ ಹರೀಶ್ ನಾಯಕ ಮತ್ತು ಶಿವಕುಮಾರ್ ಅವರನು ಬಂಧಿಸಲಾಗಿತ್ತು. ವಿಚಾರಣೆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಳಿದ ಆರೋಪಿಗಳಾದ ಶ್ಯಾಮಲಾ ಪತಿ ಕಾರ್ತಿಕೇಯನ್, ಮಧ್ಯವರ್ತಿಗಳಾದ ಸ್ವಾಮಿ ಮತ್ತು ಪುಟ್ಟರಾಜು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಈ ಮನೆಯಲ್ಲಿ ದಿನಕ್ಕೆ 6-8 ಪರೀಕ್ಷೆ ಮಾಡಲಾಗುತ್ತಿತ್ತು. ಭ್ರೂಣ ಲಿಂಗ ಪತ್ತೆಗೆ 30 ಸಾವಿರ ರೂ. ಮತ್ತು ಗರ್ಭಪಾತ ಮಾಡಿಸಿ ಭ್ರೂಣ ಹತ್ಯೆಗೆ 30 ಸಾವಿರ ಹಣವನ್ನು ಗರ್ಭಿಣಿಯರಿಂದ ವಸೂಲಿ ಮಾಡಲಾಗುತ್ತಿತ್ತು. ಪರೀಕ್ಷೆಗಾಗಿ ಕನಿಷ್ಠ 10-15 ದಿನವರೆಗೆ ಗರ್ಭಿಣಿಯರು ಕಾಯಬೇಕಾಗಿತ್ತು. ಬಳಿಕವೇ ಅವರಿಗೆ ನಿಗದಿತ ದಿನಕ್ಕೆ ಅಪಾಯಿಂಟ್‌ಮೆಂಟ್ ಕೊಡಲಾಗುತ್ತಿತ್ತು. ಅವರು ಕೊಟ್ಟ ದಿನವೇ ಬಂದು ಸ್ಕಾೃನಿಂಗ್ ಮಾಡಿಸಿಕೊಳ್ಳಬೇಕಿತ್ತು.

ಬಹಳ ದಿನಗಳಿಂದ ಈ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡುತ್ತಿತ್ತು. ಇದಕ್ಕಾಗಿ ಮಧ್ಯವರ್ತಿಗಳು ವಿವಿಧೆಡೆ ನಿಯೋಜನೆಗೊಂಡಿದ್ದರು. ಅವರು ಗ್ರಾಮಾಂತರ ಪ್ರದೇಶದ ಗರ್ಭಿಣಿಯರನ್ನು ಗುರುತು ಮಾಡಿ ಇಲ್ಲಿಗೆ ಕರೆತರುತ್ತಿದ್ದರು. ಮಧ್ಯವರ್ತಿಗಳಿಗೆ ಪ್ರತಿ ಕೇಸ್‌ಗೆ 10 ಸಾವಿರ ರೂ. ನೀಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ 2019ರಿಂದ ನಡೆಯುತ್ತಿರುವ ಎಸ್.ಕೆ.ಆಸ್ಪತ್ರೆಯ ಆಡಳಿತವನ್ನು ಬಿ.ಎಸ್ಸಿ ನರ್ಸಿಂಗ್ ಸರ್ಟಿಫಿಕೇಟ್ ಪಡೆದಿರುವ ಶ್ಯಾಮಲಾ ನಿರ್ವಹಿಸುತ್ತಿದ್ದರು. ಈ ಆಸ್ಪತ್ರೆಯಲ್ಲಿ 15 ಬೆಡ್‌ಗಳಿವೆ. ಯಾರಿಗೂ ಅನುಮಾನ ಬಾರದ ರೀತಿ ಪರೀಕ್ಷೆ ನಡೆಸುತ್ತಿದ್ದ ಆರೋಪಿ ಶ್ಯಾಮಲಾ ನೇರವಾಗಿ ಎಸ್.ಕೆ.ಆಸ್ಪತ್ರೆಗೆ ಬಂದರೆ ಭ್ರೂಣಲಿಂಗ ಪರೀಕ್ಷೆ ಮಾಡಲು ಹಿಂದೇಟು ಹಾಕುತ್ತಿದ್ದರು. ಮಧ್ಯವರ್ತಿಗಳು ಹಾಗೂ ನಂಬಿಕಸ್ಥರ ಮೂಲಕ ಬಂದರೆ ಮಾತ್ರ ಅಪಾಯಿಂಟ್‌ಮೆಂಟ್ ನೀಡುತ್ತಿದ್ದರು.

ಭ್ರೂಣಲಿಂಗ ಪರೀಕ್ಷೆಯಲ್ಲಿ ಬಂದ ಹಣದಿಂದಲೇ ಹಾರೋಹಳ್ಳಿ- ಹುನಗನಗಳ್ಳಿಯ ಮಧ್ಯೆ ಫಾರ್ಮ್‌ಹೌಸ್ ಜಾಗ ಖರೀದಿಸಿ, ಐಷಾರಾಮಿ ಮನೆ ನಿರ್ಮಿಸಲಾಗಿದೆ. ಬಳಿಕ ಎಸ್.ಕೆ.ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಲಿಂಗ ಪರೀಕ್ಷೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ಚಟುವಟಿಕೆಯನ್ನು ಈ ಮನೆಗೆ ಸ್ಥಳಾಂತರಿಸಲಾಗಿದೆ ಎಂಬುದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net