

ಹುಬ್ಬಳ್ಳಿ: ಬೆಂಗಳೂರು ಮೆಟ್ರೋ ಚಾಲನೆ ವೇಳೆ ಕ್ರೆಡಿಟ್ ಮಾತುಕತೆಯಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂಥದ್ದಲ್ಲ. ರಾಜ್ಯ ಸರ್ಕಾರದ ಜವಾಬ್ದಾರಿ ಶೇ. 87.37 ಇದೆ. ಕೇಂದ್ರ ಸರ್ಕಾರದ್ದು ಶೇ. 12.63 ಇದೆ ಎಂಬುದು ಸುಳ್ಳು. ಮೆಟ್ರೋ ಕಾಮಗಾರಿಗೆ ವಿವಿಧ ಫೇಸ್‌ನಲ್ಲಿ 20 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರ ನೀಡಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊಡಿಗೇರಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಜತೆಗೆ ಉಳಿದದ್ದನ್ನು ಲೋನ್ ಹಾಗೂ ಇತರ ಮೂಲಗಳಿಂದ ಅನುದಾನ ಸಂಗ್ರಹಿಸಲಾಗಿರುತ್ತದೆ. ಅದರ ಪಾಲು ಶೇ. 60 ಇರುತ್ತದೆ. ಅದನ್ನು ಭರಿಸುವುದು ಕೇಂದ್ರ ಸರ್ಕಾರ ಎಂದು ವಿವರಿಸಿದರು.
ನರೇಂದ್ರ ಮೋದಿ ಅವರು ವೇದಿಕೆ ಮೇಲೆ ಇದಕ್ಕೆ ಉತ್ತರ ಕೊಟ್ಟು ಸಣ್ಣವರಾಗಲಿಲ್ಲ. ಇದು ರಾಜಕೀಯ ವೇದಿಕೆಯೂ ಅಲ್ಲ. ಸರ್ಕಾರದ ಹಣವಲ್ಲ, ಜನರ ಹಣವೆಂದಷ್ಟೇ ಹೇಳಿದರು. ಸೈನಿಕರಾದ ನಾವೆಲ್ಲ ಇದಕ್ಕೆ ಉತ್ತರ ಕೊಡುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಸುರಭಿ ಉತ್ತರಿಸಿದರು. ಕರ್ನಾಟಕದ ಬೆಂಗಳೂರು ಮೆಟ್ರೋಗೆ 2021-22ರಲ್ಲಿ 3622.86, 2022-23ರಲ್ಲಿ 4041.61, 2023-24ರಲ್ಲಿ 3617.16, 2024-25ರಲ್ಲಿ 4614.58 ಅನುದಾನ ಕೊಡಲಾಗಿದೆ ಎಂದು ವಿವರಿಸಿದರು.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಕಲಿ ಮತದಾನದ ಬಗ್ಗೆ ಮಾತನಾಡಿರುವುದು ಸರಿಯಲ್ಲ. ದೊಡ್ಡ ನಗರ ಎಂದ ಮೇಲೆ ಕೆಲವರು ಇರುತ್ತಾರೆ ಹೋಗಿರುತ್ತಾರೆ. ಅದನ್ನೇ ಒಂದೇ ಮನೆಯಲ್ಲಿ ಇಷ್ಟು ಜನ ಮತದಾರರು ಎಂದರೆ ಹೇಗೆ ವಿವರಿಸುವುದು. ರಾಜ್ಯದಲ್ಲಿ ತಮ್ಮ ಪಕ್ಷದ್ದೇ ಸರ್ಕಾರವಿದೆ. ಅವರೇ ಸರಿಪಡಿಸಬಹುದಿತ್ತು. ಇವರ ಉದ್ದೇಶ ಸರ್ಕಾರದ ಸಾಂವಿಧಾನಿಕ ಸಂಸ್ಥೆಗಳನ್ನು ಅವಹೇಳನ ಮಾಡುವುದು ಎಂದು ಕಿಡಿಯಾದರು.
ಧಮಸ್ಥಳ ಗ್ರಾಮದಲ್ಲಿ ಎಸ್‌ಐಟಿ ನಡೆಸುತ್ತಿರುವ ತನಿಖೆ ಕುರಿತು ಸರ್ಕಾರಕ್ಕೇ ಸ್ಪಷ್ಟತೆ ಇಲ್ಲ. ಸಚಿವ ದಿನೇಶ ಗುಂಡೂರಾವ್ ಹೇಳಿದಂತೆ ಕೇಳುವುದಾದರೆ, ತನಿಖೆ ಹಿಂದೆ ಯಾರ ಒತ್ತಡವಿದೆ? ಎಂದು ಪ್ರಶ್ನಿಸಿ, ನಡೆಯುತ್ತಿರುವ ಅಧಿವೇಶನದಿಂದ ರಾಜ್ಯ ಸರ್ಕಾರದ ಉತ್ತರ ಬಯಸಿದರು.
ಬೆಂಗೇರಿಯಲ್ಲಿ ತಯಾರಾಗುತ್ತಿರುವ ರಾಷ್ಟ್ರ ಧ್ವಜದ ಬಗೆಗೆ ಗೌರವವಿದೆ. ಆದರೆ, ಧ್ವಜ ಸಂಹಿತೆ ತಿದ್ದುಪಡಿ ಆಗಿರುವುದು ಗೊತ್ತಿಲ್ಲ. ಸ್ಥಳೀಯ ನಾಯಕರಿಂದ ಮಾಹಿತಿ ಪಡೆಯುವೆ. ಅಲ್ಲದೇ ಬೆಂಗೇರಿಗೂ ಭೇಟಿ ನೀಡುವೆ ಎಂದರು.
ಪ್ರಮುಖರಾದ ಸೀಮಾ ಲದ್ವಾ, ವಸಂತ ನಾಡಜೋಶಿ, ಗುರು ಪಾಟೀಲ, ರಾಜು ಕೋರ್ಯಾಣಮಠ ಸುದ್ದಿಗೋಷ್ಠಿಯಲ್ಲಿದ್ದರು.