

ತುಮಕೂರು : ಜಿಲ್ಲೆಯಲ್ಲಿ ಶುಕ್ರವಾರವೂ ಕರೊನಾ ಆರ್ಭಟ ಮುಂದುವರಿದಿದೆ. ಒಂದೇ ದಿನ 25 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಕರೊನಾ ದ್ವಿಶತಕ ಬಾರಿಸಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 208ಕ್ಕೇರಿದೆ.
ಮಧುಗಿರಿ ತಾಲೂಕಿನಲ್ಲಿ 12, ತುಮಕೂರು 4 ಹಾಗೂ ಕೊರಟಗೆರೆಯಲ್ಲಿ 3 ಪ್ರಕರಣ ಪತ್ತೆಯಾಗಿವೆ. ಶಿರಾ-2, ಕುಣಿಗಲ್-2, ಪಾವಗಡ-1 ಹಾಗೂ ತುರುವೇಕೆರೆಯಲ್ಲಿ ಓರ್ವನಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ನರ್ಸ್‌ಗೂ ಸೋಂಕು: ತುಮಕೂರು ನಗರದಲ್ಲಿ 34 ವರ್ಷ ಶುಶ್ರೂಷಕಿಯೊಬ್ಬರಿಗೆ ಕರೊನಾ ಸೋಂಕು ತಗುಲಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ಖಾಸಗಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರನ್ನು ಪತ್ತೆಹಚ್ಚಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ.
ಅಶೋಕನಗರದ 4ನೇ ಕ್ರಾಸ್‌ನ 34ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಇಬ್ಬರು ಪ್ರಾಥಮಿಕ, 14 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದ್ದು, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಎಸ್.ಎಸ್.ಪುರಂನ 51 ವರ್ಷದ ವ್ಯಕ್ತಿಗೆ ನೆಗಡಿ ಕಾಣಿಸಿಕೊಂಡಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ದೃಢವಾಗಿದೆ. ಶ್ರೀರಾಮನಗರದ 40 ವರ್ಷದ ವ್ಯಕ್ತಿಗೆ ಜ್ವರ, ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರ ಪತ್ತೆ ಹಚ್ಚಲಾಗುತ್ತಿದೆ.
ತುರುವೇಕೆರೆ ದೊಡ್ಡಗೋರಗಟ್ಟದಲ್ಲಿ 2 ವರ್ಷದ ಗಂಡು ಮಗುವಿಗೆ ಸೋಂಕು ತಗುಲಿದೆ. ಮಗುವನ್ನು ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗಿದೆ. ಕೊರಟಗೆರೆ ಕೆ.ನಾಗೇನಹಳ್ಳಿ 55 ವರ್ಷದ ವ್ಯಕ್ತಿಗೆ, ಚಿಕ್ಕನಹಳ್ಳಿಗೆ ಬೆಂಗಳೂರಿಂದ ಬಂದಿದ್ದ 35 ವರ್ಷದ ವ್ಯಕ್ತಿಗೆ, ಆಂಧ್ರಪ್ರದೇಶದ ಪ್ರಯಾಣ ಹಿನ್ನೆಲೆ ಹೊಂದಿದ್ದ ಹೊಳವನಹಳ್ಳಿ ಹೋಬಳಿ ಮುದ್ದನಹಳ್ಳಿ 60 ವರ್ಷದ ವೃದ್ಧನಿಗೂ ಸೋಂಕು ತಗುಲಿದೆ. ಶಿರಾ ನಗರದ ಜಾಮೀಯಾನಗರದ 48 ವರ್ಷದ ವ್ಯಕ್ತಿಗೆ, ಚಿಕ್ಕದಾಸರನಹಳ್ಳಿಯ 16 ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗು ಸೋಂಕು ತಗುಲಿರುವುದು ದೃಢವಾಗಿದೆ.
ಬಿಸಿಎಂ ಅಧಿಕಾರಿ ಸೇರಿ 4 ಜನ ಗುಣಮುಖ!: ಪಾವಗಡ ತಾಲೂಕಿನಲ್ಲಿ ಶುಕ್ರವಾರ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದಿರುವುದು ನೆಮ್ಮದಿ ತಂದಿದೆ. ಜತೆಗೆ ಕಳೆದ ಶುಕ್ರವಾರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕು ಬಿಸಿಎಂ ಅಧಿಕಾರಿ, ಹಾಬ್ಬಂಡೆ ನಿವಾಸಿ, ಮದ್ದಿಬಂಡೆಯ ಕುರಿಗಾಹಿ ಹಾಗೂ ಪಾವಗಡ ಪಟ್ಟಣದ ಹಳೆಕುಂಬಾರ ಬೀದಿ ನಿವಾಸಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮುಂದಿನ 14 ದಿನ ಮನೆಯಲ್ಲಿಯೇ ಕ್ವಾರಂಟೈನ್ ಇರಲು ಸೂಚಿಸಿ ಇವರನ್ನು ಶುಕ್ರವಾರ ಮನೆಗೆ ಕಳುಹಿಸಲಾಗಿದೆ.
ಮಠದ ಮಕ್ಕಳಿಗಿಲ್ಲ ಸಾರಿಗೆ ವ್ಯವಸ್ಥೆ: ಕರೊನಾ ಭೀತಿ ನಡುವೆಯೂ ನಾಡಿನ ಮೂಲೆ, ಮೂಲೆಯಿಂದ ಸಿದ್ಧಗಂಗಾ ಮಠಕ್ಕೆ ಬಂದು ಪರೀಕ್ಷೆ ಬರೆದ ಮಠದ ವಿದ್ಯಾರ್ಥಿಗಳು ಶುಕ್ರವಾರ ಪರೀಕ್ಷೆ ಮುಗಿಯುತ್ತಿದ್ದಂತೆ ಊರುಗಳಿಗೆ ಹಿಂದಿರುಗಿದ್ದಾರೆ. 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಠದಲ್ಲಿ ಜೂ.25 ರಿಂದ ಜು.3ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಕಳೆದ 15 ದಿನಗಳಿಂದ ಈ ಮಕ್ಕಳನ್ನು ಮಠದ ಆಡಳಿತ ಮಂಡಳಿ ಅತ್ಯಂತ ಸುರಕ್ಷಿತವಾಗಿ ನೋಡಿಕೊಂಡಿತ್ತು. ಪ್ರತ್ಯೇಕವಾಗಿ ಈ ಮಕ್ಕಳನ್ನು ಇರಿಸಿ ಪ್ರತಿನಿತ್ಯ ಆರೋಗ್ಯ ನಿಗಾವಹಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಕೊನೇದಿನ ಹಿಂದಿ ಪರೀಕ್ಷೆ ಮುಗಿಯುತ್ತಿದ್ದಂತೆ ಮಠದ ಮಕ್ಕಳು ಊರಿಗೆ ಹೋಗುವ ಧಾವಂತದಲ್ಲಿ ಕರೊನಾ ಭೀತಿಯನ್ನೇ ಮರೆತು ಸಿಕ್ಕಸಿಕ್ಕ ವಾಹನಗಳಲ್ಲಿ ತೆರಳಿರುವುದು ಆತಂಕಕ್ಕೆ ಕಾರಣವಾಗಿದೆ. ಪರೀಕ್ಷೆ ಜವಾಬ್ದಾರಿ ಹೊತ್ತಿದ್ದ ಡಿಡಿಪಿಐ ಆಗಲಿ, ಬಿಇಒ ಆಗಲಿ ಮಕ್ಕಳು ಸುರಕ್ಷಿತವಾಗಿ ಮನೆಗೆ ಹಿಂದಿರುಗುವ ಬಗ್ಗೆ ಗಮನಹರಿಸದಿರುವುದು ಸೋಂಕು ಹರಡುವ ಭೀತಿ ಹುಟ್ಟಿಸಿದೆ.