ಅದ್ದೂರಿ ದಸರಾದಲ್ಲಿ 200 ಕೋಟಿ ರೂ. ವಹಿವಾಟು, ಉದ್ಯಮಿಗಳಿಗೆ ಚೇತರಿಕೆ ನೀಡಿದ ನಾಡಹಬ್ಬ

DSC_6172 web
Published on

ಮೈಸೂರು: ಕರೊನಾ ಕರಾಳತೆಯ ಕಾರಣ ಎರಡು ವರ್ಷಗಳಿಂದ ಕಳೆಗುಂದಿದ್ದ ನಾಡಹಬ್ಬ ಮೈಸೂರು ದಸರಾ ಈ ಬಾರಿ ಅದ್ದೂರಿಯಾಗಿ ನಡೆದಿರುವುದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ. ಹತ್ತು ದಿನಗಳ ದಸರಾ ಮಹೋತ್ಸವದಲ್ಲಿ 200 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದ್ದು, ವ್ಯಾಪಾರಿಗಳಲ್ಲಿ ಮಂದಹಾಸ ಮೂಡಿಸಿದೆ.

ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಮೈಸೂರಿನ ಉದ್ಯಮಕ್ಕೆ ಕರೊನಾ ಕರಾಳತೆ ದೊಡ್ಡ ಪೆಟ್ಟು ನೀಡಿತ್ತು. ಇದರಿಂದ ಹೋಟೆಲ್ ಉದ್ಯಮದ ಜತೆಗೆ, ಪ್ರವಾಸಿ ಕೇಂದ್ರಗಳೂ ಭಣಗುಟ್ಟಿದ್ದವು. ಸತತ ಎರಡು ವರ್ಷ ನಾಡಹಬ್ಬವನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಿ ಸರಳವಾಗಿ ಆಚರಿಸಲಾಗಿತ್ತು. ಇದರಿಂದ ಪ್ರವಾಸಿಗರು ನಗರಕ್ಕೆ ಬಾರದೆ ಪ್ರವಾಸೋದ್ಯಮ ನೆಲಕಚ್ಚಿತ್ತು. ಹೋಟೆಲ್, ರೆಸ್ಟೋರೆಂಟ್, ಆಟೋ, ಟಾಂಗಾ ಗಾಡಿ ಸೇರಿದಂತೆ ಇನ್ನಿತರ ಉದ್ದಿಮೆದಾರರು ಆದಾಯವಿಲ್ಲದೆ ಸೊರಗಿದ್ದರು.
ಕರೊನಾ ವೈರಸ್ ಅಬ್ಬರ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದ್ದರಿಂದ ಈ ಬಾರಿ 413ನೇ ದಸರಾ ಮಹೋತ್ಸವ ಅದ್ದೂರಿಯಾಗಿಯೇ ಜರುಗಿತು. ಎರಡು ವರ್ಷದಿಂದ ದಸರಾ ನೋಡಲು ಸಾಧ್ಯವಿಲ್ಲದವರ ಜತೆಗೆ, ಹೊಸ ತಲೆಮಾರಿನವರೂ ದಸರಾ ಕಣ್ತುಂಬಿಕೊಳ್ಳಲು ಮೈಸೂರಿಗೆ ಮುಗಿಬಿದ್ದರು. ಆಯುಧಪೂಜೆ ಹಾಗೂ ವಿಜಯದಶಮಿಯಂದು ನಗರದಲ್ಲಿರುವ 10,500 ಹೋಟೆಲ್ ರೂಮ್‌ಗಳು ಭರ್ತಿಯಾಗಿದ್ದವಲ್ಲದೆ, ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.

ಜಂಜೂಸವಾರಿಗೆ ನಾಲ್ಕು ದಿನ ಬಾಕಿ ಇರುವಂತೆ ನಗರಕ್ಕೆ ಪ್ರವಾಸಿಗರ ಭೇಟಿ ಏರುತ್ತಲೇ ಸಾಗಿತು. ಅಲ್ಲದೆ, ಮೆರವಣಿಗೆ ಮುಗಿದ ಬಳಿಕವೂ ಸಾಕಷ್ಟು ಪ್ರವಾಸಿಗರು ನಗರದಲ್ಲಿಯೇ ಬೀಡು ಬಿಟ್ಟು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದರು. ಮೈಸೂರಿನ ಪ್ರವಾಸಿ ತಾಣಗಳ ಜತೆಗೆ ಅಕ್ಕಪಕ್ಕದ ಬಂಡೀಪುರ, ನಾಗರಹೊಳೆ, ಮಡಿಕೇರಿ, ಕೆ.ಆರ್.ಎಸ್, ನಂಜನಗೂಡು, ತಲಕಾಡು, ಸೋಮನಾಥಪುರ ಸೇರಿದಂತೆ ಇನ್ನಿತರ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರಿಂದ ತುಂಬಿದ್ದವು. ಈ ಪ್ರವಾಸಿ ತಾಣಗಳನ್ನು ವೀಕ್ಷಿಸುವುದಲ್ಲದೆ, ಅದರ ನೆನಪಿಗಾಗಿ ಯಾವುದಾದರೂ ವಸ್ತು ಖರೀದಿ ಮಾಡಿದ್ದರಿಂದ ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿಯೂ ಜನಜಂಗುಳಿ ಹೆಚ್ಚಿತ್ತು.

ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಉದ್ಯಾನದಲ್ಲೂ ಸಫಾರಿಪ್ರಿಯರು ಕಂಡುಬಂದರು. ನಾಗರಹೊಳೆಯ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಹೆಚ್ಚು ಹುಲಿಗಳ ದರ್ಶನವಾಗುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದರು. ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್‌ಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಈ ಬಾರಿಯ ದಸರಾ ಮಹೋತ್ಸವದ ಹತ್ತು ದಿನಗಳಲ್ಲಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಗೆ 98,142 ಜನ ಭೇಟಿ ನೀಡಿದ್ದರೆ, ಮೃಗಾಲಯಕ್ಕೆ 1.55 ಲಕ್ಷ ಜನ, ಚಾಮುಂಡಿಬೆಟ್ಟಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದರು.

ಹೊರಗಿನಿಂದಲೂ ವ್ಯಾಪಾರ:
ನಾಡಹಬ್ಬ ದಸರಾ ಎಂದರೆ ರಾಜ್ಯ ಅಲ್ಲದೆ, ಹೊರ ರಾಜ್ಯಗಳಿಂದಲೂ ವ್ಯಾಪಾರಸ್ಥರು ಆಗಮಿಸುತ್ತಾರೆ. ಈ ಬಾರಿಯೂ ವಿವಿಧೆಡೆಯಿಂದ ವ್ಯಾಪಾರಸ್ಥರು ಆಗಮಿಸಿ ಬಲೂನು, ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡಿದರು. ಹತ್ತು ದಿನಗಳವರೆಗೆ ನಗರದಲ್ಲಿಯೇ ಬೀಡು ಬಿಟ್ಟು, ಬೆಳಗ್ಗೆಯಿಂದ ರಾತ್ರಿವರೆಗೂ ಅರಮನೆ, ಮೃಗಾಲಯ, ಸಂತ ಫಿಲೋಮಿನಾ ಚರ್ಚ್ ಇನ್ನಿತರ ಪ್ರವಾಸಿ ತಾಣಗಳ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ಮಾಡಿದರು. ಜಂಬೂಸವಾರಿ ಮುಗಿದ ಬಳಿಕ ಕೆಲವರು ಊರಿಗೆ ತೆರಳಿದ್ದರೆ, ಮತ್ತೆ ಕೆಲವರು ಒಂದೆರಡು ದಿನ ಇಲ್ಲಿಯೇ ಉಳಿದು ವ್ಯಾಪಾರ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net