

ಮಡಿಕೇರಿ: ಬರ ಪರಿಹಾರವಾಗಿ ಕೊಡಗು ಜಿಲ್ಲೆಗೆ ರಾಜ್ಯ ಸರ್ಕಾರ ೨೦೦ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಘಟಕ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ಮಳೆಯ ಕೊರತೆಯಿಂದ ರಾಜ್ಯವ್ಯಾಪಿ ಬರದ ಛಾಯೆ ಮೂಡಿದೆೆ. ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದೆ. ಆದರೆ, ಸರ್ಕಾರ ಬರ ಪರಿಹಾರ ನೀಡುವ ಕಾಳಜಿಯನ್ನು ತೋರುತ್ತಿಲ್ಲವೆಂದು ಟೀಕಿಸಿದ್ದಾರೆ.
ಸಕಾಲದಲ್ಲಿ ಮಳೆ ಬಾರದೆ ಭತ್ತದ ಕೃಷಿಗೆ ಹಿನ್ನಡೆಯಾಗಿದೆ, ಸೆಪ್ಟಂಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಕೃಷಿ ಫಸಲು ಮತ್ತು ಕಾಫಿ ನಷ್ಟವಾಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.೩೦ರಷ್ಟು ಕಡಿಮೆ ಮಳೆಯಾಗಿದ್ದು, ಕೃಷಿಕ ವರ್ಗ ಆತಂಕಕ್ಕೆ ಒಳಗಾಗಿದೆ. ರೈತರ ಒತ್ತಾಯದ ಹಿನ್ನೆಲೆ ರಾಜ್ಯ ಸರ್ಕಾರ ಕೊಡಗು ಜಿಲ್ಲೆಗೆ ಕೇವಲ ೭.೫ಕೋಟಿ ರೂ. ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿರುವ ೨ ಲಕ್ಷಕ್ಕೂ ಅಧಿಕ ಕೃಷಿಕರಿಗೆ ಈ ಹಣವನ್ನು ಹಂಚಿಕೆ ಮಾಡಿದರೆ ತಲಾ ೩೦೦ ರೂ. ಮಾತ್ರ ಬರ ಪರಿಹಾರ ಸಿಗುತ್ತದೆ. ಇದು ಹಸಿದ ಆನೆಗೆ ಅರೆಕಾಸಿನ ಮಜ್ಜಿಗೆಯಾದಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿಯ ತೀವ್ರತೆಯನ್ನು ಅರಿತು ಜಿಲ್ಲೆಯ ಶಾಸಕರು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ತಮ್ಮದೇ ರಾಜ್ಯ ಸರ್ಕಾರದಿಂದ ೨೦೦ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿರುವ ಭೋಜಣ್ಣ ಸೋಮಯ್ಯ, ತಪ್ಪಿದಲ್ಲಿ ಜಿಲ್ಲೆಯದ್ಯಂತ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆೆ ಎಂದು ಎಚ್ಚರಿಕೆ ನೀಡಿದ್ದಾರೆ.