

ಕಂಪ್ಲಿ: ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.
ಪಟ್ಟಣದ ವಿಜಯನಗರ ಪ್ರೌಢಶಾಲೆಯಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಕಲ್ಗುಡಿ ಉಮೇಶ, ಮಹಾಂತಿನಮಠದ ಶ್ಯಾಮಲಮ್ಮ, ಗೌರಮ್ಮ, ಎಂ.ಪಿ.ಪ್ರಕಾಶ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಸತತ 20 ವರ್ಷಗಳ ಪ್ರಯತ್ನದಿಂದ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ. 67 ವರ್ಷಗಳ ನಂತರ ಬಳ್ಳಾರಿಯಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದರು.
ಶಿಕ್ಷಕ ಸುನೀಲ್ ಮಾಲಿಪಾಟೀಲ್, ಶರಣ ಸಾಹಿತ್ಯ ಹಾಗೂ ವಚನ ವಾಜ್ಮಯ ವಿಹಾರ ಕುರಿತು ಉಪನ್ಯಾಸ ನೀಡಿ, ಸರಳ, ಅರ್ಥಪೂರ್ಣ ಜೀವನ ಸಾಗಿಸಲು ಶರಣರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಕಾಯಕ, ದಾಸೋಹ ತತ್ವದಿಂದ ಸಮ ಸಮಾಜ, ಲಿಂಗ ಸಮಾನತೆ ಸಾಧಿಸಲು ಸಾಧ್ಯ ಎಂದರು.
ಸಾಧಕರಾದ ಡಾ.ಎಸ್.ನೀಲಪ್ಪ, ಕಾರೇಮಂಗಿ ತಿಪ್ಪೇಸ್ವಾಮಿ, ಅಶೋಕ ಕುಕನೂರ ಅವರಿಗೆ ಗೌರವ ಸಮ್ಮಾನ್ ಪ್ರಶಸ್ತಿ ನೀಡಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು. ಕಮ್ಮವಾರಿ ಸಂಘದ ಉಪಾಧ್ಯಕ್ಷ ಕೆ.ಕೊಂಡಯ್ಯ, ಮುಖ್ಯಶಿಕ್ಷಕ ವಿಷ್ಣು, ದತ್ತಿ ದಾನಿಗಳಾದ ಕಲ್ಗುಡಿ ವಿಜಯಕುಮಾರ್, ಮಹಾಂತಿನಮಠದ ಆಶಾ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಹಾದಿಮನಿ ಕಾಳಿಂಗವರ್ಧನ, ಯು.ಎಂ.ವಿದ್ಯಾಶಂಕರ, ಎಲಿಗಾರ ವೆಂಕಟರೆಡ್ಡಿ ಇತರರಿದ್ದರು.