20 ವರ್ಷ ಪ್ರಾಯದ ಗಂಡಾನೆ ಸಾವು

30sunti01
Published on

ಸುಂಟಿಕೊಪ್ಪ: ಅಂದಾಜು 20 ವರ್ಷ ಪ್ರಾಯದ ಗಂಡಾನೆಯೊಂದು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.


ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಪರ್ಚಿಕೆರೆ ಎಂಬಲ್ಲಿ ಉದಯಕುಮಾರ್ ಎಂಬುವರಿಗೆ ಸೇರಿದ ತೋಟದಲ್ಲಿ ಆನೆ ಸತ್ತು ಬಿದಿದೆ. ಆದರೆ ಕುತ್ತಿಗೆಯಲ್ಲಿ ಬೇಲಿ ಹಾಕಲು ಬಳಸುವ ಮುಳ್ಳು ತಂತಿಯು ಉರುಳಿನಂತೆ ಸುತ್ತಿಕೊಂಡಿರುವುದು ಕಂಡು ಬಂದಿರುವುದು ಮೇಲ್ನೋಟಕ್ಕೆ ಇದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.


ಅವಘಡವು ಶುಕ್ರವಾರ ರಾತ್ರಿ ನಡೆದಿದೆ ಎನ್ನಲಾಗಿದ್ದು, ಆನೆಯ ಮೃತದೇಹ ಸೆಟೆದುಕೊಂಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ ಇಬ್ಬರು ಆರೋಪಿಗಳ ಸುಳಿವು ಲಭ್ಯವಾಗಿದ್ದು, ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


ಸ್ಥಳಕ್ಕೆ ಕುಶಾಲನಗರ ವಲ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಡಿಸಿಎಫ್ ಪೂವಯ್ಯ, ಪೊಲೀಸ್ ಶ್ವಾನದಳ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಡಾ.ಚಿಟ್ಟಿಯಪ್ಪ ನಡೆಸಿದರು. ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net