

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾನ್‌ಶಾಪ್‌ಗಳಲ್ಲಿ ಅಕ್ರಮವಾಗಿ ಮಾದಕವಸ್ತು ಮಾರಾಟ ಮಾಡುತ್ತಿದ್ದವರ ಮೇಲೆ ಶುಕ್ರವಾರ ದಾಳಿ ನಡೆಸಿದ ಸಿಇಎನ್ ಪೊಲೀಸರು, 20 ಲಕ್ಷ ರೂ.ಮೌಲ್ಯದ 1.15 ಕೆ.ಜಿ. ಅಫೀಮು ಜಪ್ತಿ ಮಾಡಿದ್ದಾರೆ.
ರಾಜಸ್ಥಾನ ಮೂಲದ ಬೆಳಗಾವಿ ತಾಲೂಕು ಬೋಗಾನಟ್ಟಿ ನಿವಾಸಿ ಬರಖತ್‌ಖಾನ್ ವಿಲ್ಲಾಖಾನ್ (30), ಬೆಳಗಾವಿ ಚನ್ನಮ್ಮನಗರದ ಸರವಣ್ ಅಸುರಾಂ ಬಿಸನೋಯಿ (21) ಹಾಗೂ ಹುಬ್ಬಳ್ಳಿಯ ಮೊರಾರ್ಜಿ ನಗರದ ಕಮಲೇಶ ಸುರಜನರಾಂ ಬೇನಿವಾಲಾ (25) ಬಂಧಿತರು.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ತಂಡಕ್ಕೆ ಪ್ರಶಸ್ತಿ ಘೋಷಿಸಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ರಾಜಸ್ಥಾನ ದಾಬಾ ಬಳಿಯ ಪಾನ್‌ಶಾಪ್‌ನಲ್ಲಿದ್ದ 20 ಲಕ್ಷ ರೂ. ಮೌಲ್ಯದ 1.150 ಗ್ರಾಂ ಅಫೀಮು ಜಪ್ತಿ ಮಾಡಲಾಗಿದೆ. ಬಂಧಿತರು ಲಾರಿಗಳ ಮೂಲಕ ರಾಜಸ್ಥಾನದಿಂದ ಬೆಳಗಾವಿಗೆ ಅಫೀಮು ತರುತ್ತಿದ್ದರು ಎಂಬ ಶಂಕೆಯಿದೆ. ಅಲ್ಲದೆ, ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸವಿರುವ ರಾಜಸ್ಥಾನ ಮೂಲದ ವ್ಯಕ್ತಿಗಳನ್ನೇ (ಮಾರ್ವಾಡಿ) ಟಾರ್ಗೆಟ್ ಮಾಡಿಕೊಂಡು ಅಫೀಮು ಸರಬರಾಜು ಮಾಡುತ್ತಿದ್ದ ಸಂಗತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು
ಡಾ. ಕೆ.ತ್ಯಾಗರಾಜನ್ ತಿಳಿಸಿದ್ದಾರೆ.