20 ನಿಮಿಷದಲ್ಲಿ 3 ಕೆಜಿ ಮುದ್ದೆ ಗುಳುಂ!

18-pnp 1
Published on

ಪಾಂಡವಪುರ: ತಾಲೂಕಿನ ಪಿಎಸ್‌ಎಸ್‌ಕೆ ಪ್ರೌಢಶಾಲೆ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ನಾಟಿಕೋಳಿ ಸಾರು ಮತ್ತು ರಾಗಿ ಮುದ್ದೆ ನುಂಗುವ ಸ್ಪರ್ಧೆಯಲ್ಲಿ ಕೆ.ಎಂ.ದೊಡ್ಡಿಯ ಕೆ.ಎಂ.ಸುರೇಶ್ ಪ್ರಥಮ ಬಹುಮಾನ ಪಡೆದರು.

ವಿವಿಧ ಜಿಲ್ಲೆಯ 20 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧಾಳುಗಳಿಗೆ 20 ನಿಮಿಷ ಕಾಲಾವಕಾಶ ನಿಗದಿ ಮಾಡಲಾಗಿತ್ತು. ಮೊದಲು ಅರ್ಧ ಕೆ.ಜಿ. ಮುದ್ದೆ ಜತೆಗೆ ನಾಟಿ ಕೋಳಿ ಸಾರು, ಮಾಂಸ ಬಡಿಸಲಾಯಿತು. ನಂತರ ಕಾಲು ಕೆ.ಜಿ.ಗೂ ಹೆಚ್ಚು ತೂಕದ ಮುದ್ದೆಗಳನ್ನು ಸ್ಪರ್ಧಾಳುಗಳ ಅನುಮತಿ ಮೇಲೆ ಹಂತ ಹಂತವಾಗಿ ಬಡಿಸಲಾಯಿತು. ಕೆಲವರು ಅರ್ಧಕ್ಕೆ ಸುಸ್ತಾಗಿ ಸ್ಪರ್ಧೆಯಿಂದ ಹೊರ ಬಿದ್ದರು. ಉಳಿದಂತೆ ಪೈಪೋಟಿಗಿಳಿದ ಬಹುತೇಕರು 2 ಕೆ.ಜಿ ಮುದ್ದೆ ನುಂಗಿದರು.

ಅಂತಿಮವಾಗಿ ಕೆ.ಎಂ.ದೊಡ್ಡಿಯ ಕೆ.ಎಂ.ಸುರೇಶ್ ಬರೋಬ್ಬರಿ 3.069 ಕೆಜಿ ಮುದ್ದೆ ನುಂಗಿ ಪ್ರಥಮ ಬಹುಮಾನ ಪಡೆದರು. ಹಾಸನ ಜಿಲ್ಲೆಯ ಅಹ್ರಹಾರದ ಧರ್ಮಣ್ಣ 2.675 ಕೆಜಿ ಮುದ್ದೆ ನುಂಗಿ ದ್ವಿತೀಯ ಬಹುಮಾನ ಪಡೆದರೆ, ಬೆಂಗಳೂರಿನ ಯುವರಾಜು 2.271 ಕೆ.ಜಿ. ಮುದ್ದೆ ನುಂಗಿ ತೃತೀಯ ಬಹುಮಾನ ಪಡೆದರು. ಶ್ರೀರಂಗಪಟ್ಟಣದ ಕೂಡಲಕುಪ್ಪೆ ಗ್ರಾಮದ ಸ್ವಾಮಿ 2.228 ಕೆ.ಜಿ. ಮುದ್ದೆ ನುಂಗಿ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು.

ವಿಜೇತರಿಗೆ ಮೊದಲ ಬಹುಮಾನವಾಗಿ ಟಗರು, ಎರಡನೇ ಬಹುಮಾನವಾಗಿ ಮೇಕೆ, ಮೂರನೇ ಬಹುಮಾನ 5 ನಾಟಿ ಕೋಳಿ ಹಾಗೂ ನಾಲ್ಕನೇ ಬಹುಮಾನವಾಗಿ 2 ನಾಟಿ ಕೋಳಿಗಳನ್ನು ನೀಡಿ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಸ್ಪರ್ಧೆಗೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. ವಿಜಯ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಮಂಜು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿ ದೈಹಿಕ ಶಿಕ್ಷಕ ಬಸವರಾಜು ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಅಧ್ಯಕ್ಷ ಎಚ್.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ನಿರಂಜನ್, ತಾಲೂಕು ಅಧ್ಯಕ್ಷ ಸಿದ್ದರಾಮು, ಹಾರೋಹಳ್ಳಿ ಎಚ್.ಕೆ.ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net