20 ಕೋಟಿ ರೂ.ವೆಚ್ಚದಲ್ಲಿ ಚಿತ್ರದುರ್ಗದಲ್ಲಿ ಹೈಟೆಕ್ ವಸತಿ ಶಾಲೆ ನಿರ್ಮಾಣ

CTD REDDI JANASANGA -----
Published on

ಚಿತ್ರದುರ್ಗ: ಜಿಲ್ಲಾ ರೆಡ್ಡಿ ಜನ ಸಂಘದಿಂದ ನಗರದ ಚಳ್ಳಕೆರೆ ರಸ್ತೆಯ ಕಲ್ಲಹಳ್ಳಿ-ರಾಮಜೋಗಿಹಳ್ಳಿ ನಡುವೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಹೈಟೆಕ್ ವಸತಿ ಶಾಲೆ, ಕಾಲೇಜು ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಸಂಘದ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ರೆಡ್ಡಿ ಜನಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಶಾಲೆ ನಿರ್ಮಾಣಕ್ಕೆ ಈಗಾಗಲೇ 9 ಎಕರೆ ಜಮೀನು ಖರೀದಿ ಪ್ರಕ್ರಿಯೆ ನಡೆದಿದೆ. ಮುಂದಿನ ವರ್ಷ ಅಂದಾಜು 20 ಕೋಟಿ ರೂ.ವೆಚ್ಚದ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಗುರಿ ಇದೆ. ಈ ಕಟ್ಟಡಕ್ಕೆ ಹಲವರು ವಂತಿಗೆ ಕೊಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ, ಸಂಘದ ಆದಾಯದಿಂದಲೇ ಶಾಲಾ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಹೃದಯ ಭಾಗದಲ್ಲಿದ್ದ ಸಂಘದ ಶಿಥಿಲ ಹಾಸ್ಟೆಲ್ ಕಟ್ಟಡ ಕೆಡವಲಾಗಿದೆ. ಅಲ್ಲಿ ಅಂದಾಜು 8 ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದರು.

ಚಿತ್ರದುರ್ಗದ ಜಿಲ್ಲೆಯ ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಅತ್ಯಾಧುನಿಕ ಸವಲತ್ತುಗಳಿರುವ ವಸತಿ ಶಾಲೆ ನಿರ್ಮಿಸಲಾಗುವುದು. ಇದಕ್ಕಾಗಿ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುವುದು ಎಂದರು.

ರೆಡ್ಡಿ ಸಮುದಾಯ ಬಹುತೇಕ ಕೃಷಿ ಚಟುವಟಿಕೆಗೆ ಸೀಮಿತವಾಗಿದ್ದ ಸಂದರ್ಭದಲ್ಲಿ ಸಮಾಜದ ಹಿರಿಯರು ಮಕ್ಕಳಿಗೆ ಶಿಕ್ಷಣ ನೀಡುವ ಪ್ರಮುಖ ಉದ್ದೇಶದಿಂದ ಸ್ಥಾಪಿಸಿದ್ದ ಈ ಸಂಘ ಇಂದು ಆರ್ಥಿಕವಾಗಿ ಸದೃಢವಾಗಿದೆ. ಪ್ರತಿಭಾ ಪುರಸ್ಕಾರ ಮೊದಲಾದವುಗಳ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕಾಗಿ 59 ಲಕ್ಷ ರೂ.ವೆಚ್ಚ ಮಾಡಲಾಗಿದೆ. ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶದ ಮಕ್ಕಳು ಪ್ರೋತ್ಸಾಹ ಧನ ಪಡೆದಿದ್ದಾರೆ. ಬರುವ ದಿನಗಳಲ್ಲಿ ಐಎಎಸ್ ಹಾಗೂ ಕೆಎಎಸ್ ತರಬೇತಿ ಕೇಂದ್ರ ಆರಂಭಿಸುವ ಯೋಜನೆ ಕೂಡ ಇದೆ ಎಂದರು.

ಆರಂಭದಲ್ಲಿ ಸಮಾಜದ ಶ್ರೇಯೋಭಿವೃದ್ಧಿಗೆ ಸಂಘಕ್ಕೆ ದೇಣಿಗೆ ನೀಡಿದವರ ಭಾವಚಿತ್ರಗಳನ್ನು ಸಂಘದ ಕಚೇರಿಗಳಲ್ಲಿ ಹಾಕುವ ಮೂಲಕ ಸ್ಮರಿಸಲಾಗುವುದು ಎಂದರು.

ಸಂಘದ ಕಾರ್ಯದರ್ಶಿ ಡಿ.ಕೆ.ಶೀಲಾ ಮಾತನಾಡಿ, ಸಮಾಜದ ಹಿರಿಯರ ಪರಿಶ್ರಮದಿಂದ 1932 ರಲ್ಲಿ ಸ್ಥಾಪನೆಗೊಂಡ ರೆಡ್ಡಿ ಜನ ಸಂಘವು ಜಿಲ್ಲೆಯಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದೆ. ಆರ್ಥಿಕವಾಗಿ ಬಹಳ ಶ್ರೀಮಂತವಾಗಿದೆ. ಮುಂದಿನ ದಿನಗಳಲ್ಲಿ ಹಲವು ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಿದೆ ಎಂದರು.

2023-24ನೇ ಸಾಲಿನಲ್ಲಿ ಜಗಳೂರಿನಲ್ಲಿ ಹಾಸ್ಟೆಲ್ ಕಟ್ಟಡದ ನವೀಕರಣ ಕೈಗೊಳ್ಳಲಾಗಿದೆ. ಹೊಸದಾಗಿ ನಾಲ್ಕು ರೂಂಗಳು, ಗ್ರಂಥಾಲಯ ಹಾಗೂ ಕಾಂಪೌಂಡ್ ನಿರ್ಮಿಸಲಾಗಿದೆ. ಜಿಲ್ಲೆಯ ಸಮುದಾಯ ಭವನದಲ್ಲೂ ಹಲವು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ರೆಡ್ಡಿ ಜನ ಸಂಘದ ಕಾರ್ಯದರ್ಶಿಗಳಾದ ಜೆ. ಪರಶುರಾಮ, ಖಜಾಂಚಿ ಜಿ.ವೈ. ಸುರೇಶ್‌ಕುಮಾರ್, ಸದಸ್ಯರಾದ ಕೆ.ವಿ. ರಾ ಮಕೃಷ್ಣ, ವಿ.ಆರ್. ಮಂಜುನಾಥ್, ಕೆ.ಎಚ್. ಸುದರ್ಶನರೆಡ್ಡಿ, ಆರ್.ಎನ್. ವೇಣುಗೋಪಾಲ, ಡಾ.ಕೆ.ಜಿ. ರಾಘವರೆಡ್ಡಿ, ಡಾ.ಜಿ.ಟಿ.ತಿಪ್ಪಾರೆಡ್ಡಿ, ಎಸ್. ನಾಗರಾಜ್, ಜಿ.ಟಿ. ತಿಪ್ಪೇಶ್, ಪಿ. ಚಂದ್ರರೆಡ್ಡಿ, ಆರ್.ವಿ. ಮಾರುತೇಶರೆಡ್ಡಿ, ಡಾ.ಎಸ್.ಎನ್. ಹರೀಶ್, ರೂಪಾ, ಸುಜಾತ, ಸುಮನ್, ರೇಖಾ, ಇಂದಿರಮ್ಮ ಇದ್ದರು.

ಉಪಾಧ್ಯಕ್ಷ ಎಂ.ಕೆ.ಅನಂತರೆಡ್ಡಿ ಸ್ವಾಗತಿಸಿದರು. 2024-25ನೇ ಸಾಲಿನ ಆಯ-ವ್ಯಯ ಪಟ್ಟಿಗೆ ಸಭೆ ಅನುಮೋದನೆ ನೀಡಿತು. ಅಂಜನಾ ನೃತ್ಯ ಕಲಾ ಕೇಂದ್ರದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net