20 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ

nrp hakkupatra
ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿಗೊಳಗಾದ ಕಡಹಿನಬೈಲು, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗಳ ವಿವಿಧ ಗ್ರಾಮಗಳ ರೈತರೊಂದಿಗೆ ಶೆಟ್ಟಿಕೊಪ್ಪದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. ಅಶ್ವಿನಿ, ಸುನೀಲ್‌ಕುಮಾರ್, ಚಂದ್ರಶೇಖರ್, ನಾಗರಾಜು, ಪಿ.ಆರ್.ಸದಾಶಿವ ಇತರರಿದ್ದರು.
Published on

ಎನ್.ಆರ್.ಪುರ: ಕಾಡಾನೆಗಳು ನಾಡಿಗೆ ಬಾರದಂತೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು 60 ಕೋಟಿಯಿಂದ 70 ಕೋಟಿ ರೂಪಾಯಿ ಅಗತ್ಯ ಇದ್ದು, ಸದ್ಯಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ 20 ಕೋಟಿ ರೂ. ಅನುದಾನ ನೀಡಲು ಒಪ್ಪಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿಗೊಳಗಾದ ಕಡಹಿನಬೈಲು, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗಳ ವಿವಿಧ ಗ್ರಾಮಗಳ ರೈತರೊಂದಿಗೆ ಶುಕ್ರವಾರ ಶೆಟ್ಟಿಕೊಪ್ಪದ ನವಗ್ರಾಮದ ಸಮುದಾಯ ಭವನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆ ಇತರ ಪ್ರಾಣಿಗಳಿಂದ 60 ಲಕ್ಷ ರೂ. ಮೊತ್ತದ ಬೆಳೆಹಾನಿಯಾಗಿತ್ತು. ಈಗಾಗಲೇ 30 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಾಡುಪ್ರಾಣಿಗಳಿಂದ ಜೀವ ಹಾನಿ ಹಾಗೂ ಬೆಳೆ ಹಾನಿಗಳಿಗೆ ನೀಡುತ್ತಿದ್ದ ಪರಿಹಾರ ದುಪ್ಪಟ್ಟು ಮಾಡಲಾಗಿದೆ. ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಉಮೇಶ ಎಂಬುವರು ಕಾಡಾನೆಗಳ ದಾಳಿಯಿಂದ ಮೃತಪಟ್ಟಾಗ 15 ಲಕ್ಷ ರೂ. ಪರಿಹಾರ ನೀಡಿದ್ದೇವೆ. ಎಕ್ಕಡಬೈಲಿನ ರೈತ ಎಲಿಯಾಸ್ ಮೃತಪಟ್ಟಾಗ ಸಹ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದ್ದೇವೆ. ಈ ಭಾಗಕ್ಕೆ ಖಾಯಂ ಎಲಿಫೆಂಟ್ ಟಾಸ್ಕ್‌ಫೋರ್ಸ್ ತಂಡ ನೀಡುವಂತೆ ಕೇಳಿದ್ದೇನೆ. ಈಗಿರುವ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡಕ್ಕೆ ಶೀಘ್ರದಲ್ಲೇ ವಾಹನ ನೀಡುತ್ತೇವೆ ಎಂದು ತಿಳಿಸಿದರು. ಗ್ರಾಪಂ ಮಾಜಿ ಸದಸ್ಯ ಶೆಟ್ಟಿಕೊಪ್ಪ ಮಹೇಶ್ ಅವರು ಜನಸಂಪರ್ಕ ಸಭೆಯ ಉದ್ದೇಶ ತಿಳಿಸಿದರು.

ಕಾಡಾನೆ ದಾಳಿಯಿಂದ ಬಾಳೆ ನಾಶವಾದ ಕಡಹಿನಬೈಲು ಗ್ರಾಮದ ಭದ್ರಾ ಕಾಲನಿಯ ಜೋಸೆಫ್ ಎಂಬುವರ ತೋಟಕ್ಕೆ ಶಾಸಕ ಟಿ.ಡಿ.ರಾಜೇಗೌಡ, ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸೂಸಲವಾನಿ ಗ್ರಾಮದ ಜೇನುಕಟ್ಟೆಸರ ಎಂಬ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ವಾಸ ಮಾಡುವ ಎರಡು ಕುಟುಂಬದವರಿಗೆ ಧೈರ್ಯ ತುಂಬಿದರು.

ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ಚಂದ್ರಶೇಖರ್, ಎ.ಬಿ.ಮಂಜುನಾಥ, ಶೈಲಾ ಮಹೇಶ್, ಲಿಲ್ಲಿ ಮಾತುಕುಟ್ಟಿ, ರವೀಂದ್ರ, ವಾಣಿ ನರೇಂದ್ರ, ಪೂರ್ಣಿಮಾ ಸಂತೋಷ್, ಗಾಂಧಿಗ್ರಾಮ ನಾಗರಾಜು, ಪಿ.ಆರ್.ಸದಾಶಿವ, ಇ.ಸಿ.ಜೋಯಿ, ಸಾಜು, ಬಿನು, ನರೇಂದ್ರ, ಜುಬೇದಾ, ಕೆ.ಎಂ.ಸುಂದರೇಶ್, ಅಬೂಬಕರ್, ಪ್ರವೀಣ್, ಆದರ್ಶ, ನೇಹಾ ಇದ್ದರು.

ಐದು ವರ್ಷದ ಹಿಂದೆ 38 ಕಾಡಾನೆಗಳು ಭದ್ರಾ ವೈಲ್ಡ್‌ಲೈಫ್‌ನಿಂದ ಈ ಭಾಗಕ್ಕೆ ಬಂದಿದ್ದವು. ಈಗ 50 ಕ್ಕೆ ಏರಿಕೆಯಾಗಿದೆ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಆನೆಗಳ ನಡವಳಿಕೆ, ಜೀವನ ಶೈಲಿಯ ಬಗ್ಗೆ ಎರಡು ದಿನಗಳ ಕಾರ್ಯಾಗಾರ ಮಾಡಲಾಗಿದ್ದು, ಆನೆಗಳ ತಜ್ಞರನ್ನು ಕರೆಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಆನೆಗಳನ್ನು ಬೆದರಿಸಲು ಹೋಗದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಶೀಘ್ರದಲ್ಲೇ ಕಂಟ್ರೋಲ್ ರೂಂ ಮಾಡಿ ದೂರವಾಣಿ ನಂಬರ್ ನೀಡುತ್ತೇವೆ. ಆ ನಂಬರಿಗೆ ಸಾರ್ವಜನಿಕರು ದೂರು ನೀಡಬಹುದು ಎಂದು ಕೊಪ್ಪ ಡಿಎಫ್‌ಒ ನಂದೀಶ್ ಮಾಹಿತಿ ನೀಡಿದರು. ರೈಲ್ವೆ ಬ್ಯಾರಿಕೇಡ್, ಟೆಂಟಕಲ್ ಫೆನ್ಸಿಂಗ್ ಸೇರಿದಂತೆ ಎಲ್ಲ ಆಯಾಮಗಳ ಪರಿಶೀಲನೆ ಮಾಡುತ್ತಿದ್ದೇವೆ. ಶೃಂಗೇರಿ ಕ್ಷೇತ್ರದಲ್ಲಿ ಪ್ರಾಣಿಗಳಿಂದ 60 ಲಕ್ಷ ರೂ. ಮೌಲ್ಯದ ಬೆಳೆ ನಷ್ಟವಾಗಿತ್ತು. 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದ 30 ಲಕ್ಷದಲ್ಲಿ 15 ಲಕ್ಷ ಮಂಜೂರಾಗಿದ್ದು ಎರಡು ದಿನದಲ್ಲಿ ವಿತರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net