

ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣನಾದ ಅಪರಾಧಿಗೆ ನಗರದ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 51 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪಿರಿಯಾಪಟ್ಟಣದ ಕೋಗಿಲವಾಡಿ ಹಾಡಿ ನಿವಾಸಿ ಹರೀಶ ಶಿಕ್ಷೆಗೆ ಗುರಿಯಾದ ಯುವಕ.
ಏನಿದು ಪ್ರಕರಣ?: ಈತ ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡು ಮದುವೆಯಾಗು ಎಂದು ಒತ್ತಾಯ ಮಾಡುತ್ತಿದ್ದ. 2 ವರ್ಷಗಳ ಹಿಂದೆ ಆಕೆಯ ಮನೆಯ ಹೋಗಿ ಪುಸಲಾಯಿಸಿ ಅತ್ಯಾಚಾರವೆಸಗಿದ್ದು, ಬಾಲಕಿ ಗರ್ಭಿಣಿಯಾದ ಮೇಲೆ ಮಗುವನ್ನು ತೆಗೆಸು ಎಂದು ಕೊಲೆ ಬೆದರಿಕೆ ಹಾಕಿದ್ದ. ಇದಕ್ಕೆ ಒಪ್ಪದೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಅಪ್ರಾಪ್ತೆ ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೈಮಾ ಕಮರೋಜ್, 50 ಸಾವಿರ ರೂ.ದಂಡದೊಂದಿಗೆ 20 ವರ್ಷ ಶಿಕ್ಷೆ ವಿಧಿಸಿದ್ದಾರೆ. ಜತೆಗೆ ಕೊಲೆ ಬೆದರಿಕೆ ಮತ್ತು ವಂಚನೆ ಅಪರಾಧಕ್ಕಾಗಿ 6 ತಿಂಗಳು ಸಾದಾ ಸಜೆ ಹಾಗೂ 1 ಸಾವಿರ ರೂ.ದಂಡ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ. ಇದರೊಂದಿಗೆ ಬಾಲಕಿಯು 5 ಲಕ್ಷ ರೂ.ಪರಿಹಾರ ಪಡೆಯಲು ಅರ್ಹರು ಎಂದು ತೀರ್ಪಿನದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.