ಕೊಪ್ಪಳ: ಅಪ್ರಾಪ್ತಳನ್ನು ಅಪಹರಿಸಿ ಅತ್ಯಾಚಾರ ಎಸಗಿದವನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ನಗರದ ತ್ವರಿತ ವಿಲೇವಾರಿ (ಪೋಕ್ಸೊ) ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಗಜೇಂದ್ರಗಡ ತಾಲೂಕಿನ ನೆಲ್ಲೂರು ಗ್ರಾಮದ ಕುಮಾರ ಚವ್ಹಾಣ ಶಿೆಗೆ ಗುರಿಯಾದ ಅಪರಾಧಿ. ಈತ ಯಲಬುರ್ಗಾ ತಾಲೂಕಿನ ಗ್ರಾಮವೊಂದರ ಅಪ್ರಾಪ್ತಳ ಸಂಬಂಧಿ. ಬಾಲಕಿ ಮನೆಯಲ್ಲಿಯೇ ವಾಸವಿದ್ದ ಈತ ಎರಡು ಬಾರಿ ಅತ್ಯಾಚಾರ ಎಸಗಿದ್ದ. ಬಳಿಕ 2021ರ ಆಗಸ್ಟ್ 22ರಂದು ಬೆಳಗಿನ ಜಾವ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅಪಹರಿಸಿದ್ದ. ಮುಧೋಳ ತಾಲೂಕಿನ ಜಮೀನೊಂದರ ಶೆಡ್ನಲ್ಲಿ 2.5 ತಿಂಗಳು ವಾಸವಿದ್ದ. ಅಲ್ಲಿಯೂ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ.
ಈ ಸಂಬಂಧ ಪ್ರಕರಣ ದಾಖಲಸಿಕೊಂಡ ಯಲಬುರ್ಗಾ ಪೊಲೀಸರು, ಸಿಪಿಐ ಎಂ.ನಾಗರೆಡ್ಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕುಮಾರ ಚವ್ಹಾಣನನ್ನು ಅಪರಾಧಿಯೆಂದು ತೀರ್ಮಾನಿಸಿದೆ. 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶ(ಪೋಕ್ಸೊ) ಕುಮಾರ ಡಿ.ಕೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ.