

ಉಡುಪಿ: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೊಕ್ಸೋ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ.
ಬೈಂದೂರು ನಿವಾಸಿ ಮಧುಕರ ಮರಾಠಿ(24) ಶಿಕ್ಷೆಗೆ ಗುರಿಯಾದವನು. ನೊಂದ ಬಾಲಕಿಯು ಆರೋಪಿಯ ಸಂಬಂಧಿಕನಾಗಿದ್ದು, ತನ್ನ ಮನೆಗೆ ಬಂದ ನೊಂದ ಬಾಲಕಿಯನ್ನು ಮಧುಕರ ಮರಾಠಿ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸ್ವಲ್ಪ ದಿನದಲ್ಲಿ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಮನೆಯವರು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಕೆ ಗರ್ಭವತಿಯಾಗಿರುವುದು ತಿಳಿದುಬಂತು. ಈ ಬಗ್ಗೆ ವೈದ್ಯರು ಪೊಲೀಸ್ ಠಾಣೆಗೆ ಸೂಕ್ತ ಕ್ರಮಕ್ಕಾಗಿ ಮಾಹಿತಿ ನೀಡಿದ್ದು, ಬಾಲಕಿಯ ತಾಯಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಒಟ್ಟು 30 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ನೊಂದ ಬಾಲಕಿಯ ಸಾಕ್ಷಿ ಮತ್ತು ಡಿಎನ್ಎ ವರದಿಯಲ್ಲಿ ಆರೋಪಿ ಸಂತ್ರಸ್ತ ಬಾಲಕಿಯ ಗರ್ಭಕ್ಕೆ ಕಾರಣವಾಗಿರುವ ಪೂರಕ ಸಾಕ್ಷಿಯನ್ನು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಗೆ 20 ವರ್ಷ ಕಠಿಣ ಜೈಲುಶಿಕ್ಷೆ, 31 ಸಾವಿರ ರೂ. ದಂಡ ವಿಧಿಸಲಾಗಿದ್ದು, ದಂಡದಲ್ಲಿ 11 ಸಾವಿರ ರೂ. ಸರ್ಕಾರಕ್ಕೆ ಮತ್ತು 20 ಸಾವಿರ ರೂ. ಸಂತ್ರಸ್ತ ಬಾಲಕಿಗೆ ನೀಡಬೇಕು. ಸರ್ಕಾರ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ಎಂದು ನ್ಯಾಯಾಲಯ ಆದೇಶ ನೀಡಿದೆ.