

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಜನಜನಿತ. ಎಲ್ಲಾ ರೋಗಗಳಿಗೂ ಕಾರಣವಾಗುವ ದೇಹದಲ್ಲಾಗುವ ಪ್ರಾರಂಭಿಕ ಬದಲಾವಣೆಯೆಂದರೆ ಜೀರ್ಣಶಕ್ತಿಯ ಕುಂದುವಿಕೆ. ಪಚನಶಕ್ತಿಯೆಂಬುದು ಕೇವಲ ಜಠರಕ್ಕೆ ಸಂಬಂಧಿಸಿದ್ದಲ್ಲ! ದೇಹದ ಪ್ರತಿ ಅಣುವಿನಲ್ಲಿ, ಎಲ್ಲಾ ಜೀವಕೋಶಗಳಲ್ಲಿ ನಿರಂತರವಾಗಿ ಕಾರ್ಯನಿರತವಾಗಿರುವ ಪ್ರಕ್ರಿಯೆ. ಇವೆಲ್ಲವುಗಳಿಗೆ ಅಗ್ನಿಯೇ ಮೂಲ. ಹೊಟ್ಟೆಗೆ ಸಂಬಂಧಿಸಿದಂತೆ ಜಠರಾಗ್ನಿ ಎಂದು ಕರೆದರೆ ಜೀವಕೋಶಗಳಿಗೆ ಹೊಂದಿಕೊಂಡು ವಿವಿಧ ಭೂತಾಗ್ನಿ, ಧಾತ್ವಗ್ನಿಗಳು ಶರೀರವನ್ನು ಕಾಪಾಡುತ್ತವೆ. ಸೂರ್ಯನಿಂದ ಜಗತ್ತಿನ ಜೀವಿಗಳಿಗೆ ಈ ಅಗ್ನಿಬಲ ಬರುತ್ತದೆ. ಅಂದಮೇಲೆ ಈ ಅಗ್ನಿಶಕ್ತಿಯನ್ನು ಕಾಪಾಡಿಕೊಳ್ಳುವುದು ಸ್ವಾಸ್ಥ್ಯ ಆಕಾಂಕ್ಷಿಗಳೆಲ್ಲರ ಕರ್ತವ್ಯವಾಗುತ್ತದೆ. ಜೀರ್ಣಶಕ್ತಿಯು ಬಲವನ್ನು ಕಳೆದುಕೊಳ್ಳಲು ಕಾರಣವಾಗುವ ಇಪ್ಪತ್ತು ಅಂಶಗಳನ್ನು ಆಯುರ್ವೇದ ಗ್ರಂಥಗಳಲ್ಲಿ ನೋಡಬಹುದು.