

ಕುಶಾಲನಗರ : ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯದಿಂದ ನದಿಗೆ ಸೋಮವಾರ 20 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.
ಹೆಚ್ಚು ನೀರು ಬಿಡುತ್ತಿರುವುದರಿಂದ ನದಿಯಲ್ಲಿ ಹರಿವು ಹೆಚ್ಚಾಗಿರುವ ಕಾರಣ ನದಿ ದಡದ ನಿವಾಸಿಗಳಿಗೆ ಕಾವೇರಿ ನೀರಾವರಿ ನಿಗಮದಿಂದ ಎಚ್ಚರಿಕೆ ನೀಡಲಾಗಿದೆ. 20 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ಡ್ಯಾಂ ಕೆಳ ಭಾಗದಲ್ಲಿ ಇರುವ ಹಾರಂಗಿ ಹುದುಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸುರಕ್ಷತೆಗಾಗಿ ಸೇತುವೆಯ ಎರಡು ಕಡೆ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಸೋಮವಾರ ಜಲಾಶಯಕ್ಕೆ ಕುಶಾಲನಗರ ತಹಸೀಲ್ದಾರ್ ಕಿರಣ್ ಗೋರಯ್ಯ ಭೇಟಿ ನೀಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಒಳಹರಿವು ನಿರೀಕ್ಷೆಗೂ ಮೀರಿ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.