

ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಮುನೇಕೋಳಾಲದಲ್ಲಿ ಬಾಡಿಗೆ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ವಿುಸಿಕೊಂಡು ವಾಸವಿದ್ದವರನ್ನು ಕಿಡಿಗೇಡಿಗಳ ಗುಂಪೊಂದು ಬಲವಂತವಾಗಿ ತೆರವು ಮಾಡಿದೆ. ಇದರಿಂದ ವಾಸಕ್ಕೆ ಜಾಗವಿಲ್ಲದೆ 20ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ.
ಆಸ್ತಿ ವಿಚಾರದ ಹಿನ್ನೆಲೆ ಖಾಸಗಿ ಜಾಗದಲ್ಲಿ ವಾಸವಿದ್ದವರನ್ನು ಮಾರಕಾಸ್ತ್ರ ಮತ್ತು ಜೆಸಿಬಿಯೊಂದಿಗೆ ಬಂದ ಗುಂಪು ಶೆಡ್ಗಳನ್ನು ಏಕಾಏಕಿ ತೆರವು ಮಾಡಿದೆ.
ಇದರಿಂದ ಪೂರ್ಣ ನೆಲೆ ಕಳೆದುಕೊಂಡಿರುವ 20ಕ್ಕೂ ಹೆಚ್ಚು ಕುಟುಂಬಗಳು ನೆಲೆಯಿಲ್ಲದೆ ಮಕ್ಕಳು ಮತ್ತು ಮಹಿಳೆಯರು ಶೆಡ್ನ ಅವಶೇಷಗಳ ಬದಿಯಲ್ಲಿ ಜೀವನ ಮಾಡುತ್ತಿದ್ದಾರೆ.
ಪೊಲೀಸರಿಂದ ವಿಚಾರಣೆ: ಸ್ಥಳಕ್ಕೆ ಆಗಮಿಸಿದ ಮಾರತ್ತಹಳ್ಳಿ ಪೋಲಿಸರು 3 ಜೆಸಿಬಿ, ಮತ್ತು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತೆರವು ಮಾಡುತ್ತಿದ್ದ 12 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮರುಕಳಿಸುತ್ತಿರುವ ಶೆಡ್ ತೆರವು: ನಗರದಲ್ಲಿರುವ ಖಾಲಿ ಜಮೀನುಗಳಲ್ಲಿ ತಾತ್ಕಾಲಿಕ ಶೆಡ್ ನಿರ್ವಿುಸಿಕೊಂಡು ವಾಸವಿರುವವರ ಶೆಡ್ಗಳ ತೆರವು ಕಾರ್ಯ ಮೇಲಿಂದ ಮೇಲೆ ನಡೆಯುತ್ತಿವೆ. ಇತ್ತೀಚೆಗೆ ಪಾಲಿಕೆಯಿಂದ ನೂರಾರು ಶೆಡ್ಗಳನ್ನು ತೆರವು ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
20 ಗುಂಟೆ ಜಮೀನು ಇದ್ದು, ಪಿತ್ರಾರ್ಜಿತ ಆಸ್ತಿಯಾಗಿದೆ. 4 ಶೆಡ್ಗಳನ್ನು ನಿರ್ವಿುಸಿಕೊಂಡು ವಾಸವಿದ್ದೆವು. ಪಕ್ಕದಲ್ಲಿ ಪಶ್ಚಿಮ ಬಂಗಾಳದಿಂದ ಬಂದ ಕುಟುಂಬಗಳಿಗೆ ತಾತ್ಕಾಲಿಕ ಶೆಡ್ ನಿರ್ವಿುಸಿಕೊಂಡು ವಾಸವಿರಲು ಬಾಡಿಗೆಗೆ ಅವಕಾಶ ನೀಡಿದ್ದೇವೆ. ಹಲವು ಕುಟುಂಬಗಳು ಇಲ್ಲಿ ವಾಸವಿದ್ದು, ಕಿಡಿಗೇಡಿಗಳ ದಾಳಿಯಿಂದ ನೆಲೆ ಕಳೆದುಕೊಂಡಿದ್ದೇವೆ. ತೆರವು ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ನವೀನ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.