ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದಿಂದ 20 ಶಾಲೆ ದತ್ತು

7 gdg 2b
Published on

ಗದಗ: ಸ್ಥಳೀಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯವು (ಆರ್​ಡಿಪಿಆರ್​ಯುು) ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮೀಣ ಭಾಗದ 20 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಹಾಗೂ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದೆ.

ಸಂಘ ಸಂಸ್ಥೆಗಳು ಸೌಲಭ್ಯ ವಂಚಿತ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸಾಮಾನ್ಯವಾಗಿದೆ. ಆದರೆ, ಅನೇಕರು ಒಂದು ಅಥವಾ ಎರಡು ಶಾಲೆಗಳನ್ನು ದತ್ತು ಪಡೆಯುತ್ತಾರೆ. ಆರ್​ಡಿಪಿಆರ್​ಯುು 20 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು, ಸುಮಾರು 35527 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಅಲ್ಲದೆ, ಈ 20 ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 128 ಶಿಕ್ಷಕರಿಗೆ ವಿಶ್ವವಿದ್ಯಾಲಯದ ತಜ್ಞರ ತಂಡದಿಂದ ತರಬೇತಿ ನೀಡಲು ಸಿದ್ಧತೆ ನಡೆಸಿದೆ. ಶಾಲೆಗಳ ದತ್ತು ಪಡೆಯುವ ಕುರಿತು ಆರ್​ಡಿಪಿಆರ್​ಯುು ಕುಲಪತಿ

ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಅವರು ಮುಖ್ಯಮಂತ್ರಿ ಅವರಿಂದ ನವೆಂಬರ್ ತಿಂಗಳಲ್ಲಿಯೇ ದತ್ತು ಸ್ವೀಕಾರ ಪತ್ರವನ್ನು ಪಡೆದುಕೊಂಡಿದ್ದರು. ಇದೀಗ ಶಾಲೆಗಳ ಆಯ್ಕೆ ಅಂತಿಮಗೊಳಿಸಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಂಕದಕಟ್ಟಿ (2), ಹುಲಕೋಟಿಯ ಸರ್ಕಾರಿ ಪ್ರಾಥಮಿಕ ಶಾಲೆ (3), ಕೆ.ಎಚ್. ಪಾಟೀಲ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹುಲಕೋಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಸಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಯಿಲಗೋಳ, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಕಳಸಾಪುರ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಳಸಾಪುರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುರ್ತಕೋಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಕುರ್ತಕೋಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಕುರ್ತಕೋಟಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಾಗಾವಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಾವಿ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಶಿರಹಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಟ್ಟೂರು ತಾ. ಶಿರಹಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಿ ತಾ.ರೋಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಿಂಡೂರ ತಾ. ರೋಣ ಶಾಲೆಗಳನ್ನು ಆರ್​ಡಿಪಿಆರ್​ಯುು ದತ್ತು ಪಡೆದುಕೊಂಡಿದೆ.

ದತ್ತು ಪಡೆಯುವ ಯೋಜನೆಗೆ ಯಾವುದೇ ಅನುದಾನ ಇರುವುದಿಲ್ಲ. ವಿಶ್ವವಿದ್ಯಾಲಯದಲ್ಲಿ ಇರುವಂತಹ ಸಂಪನ್ಮೂಲ ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿಯೇ ಮುಖ್ಯ ಧ್ಯೇಯವಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯಾಗಿದ್ದು, ಈ ವಿಷಯಗಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಾರದಲ್ಲಿ ಒಂದು, ಎರಡು ಸಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ಮಕ್ಕಳಿಗೆ ಪಾಠ ಮಾಡಿಸಲು ನಿರ್ಣಯಿಸಲಾಗಿದೆ ಎಂದು ಆರ್​ಡಿಪಿಆರ್​ಯುು ಅಧಿಕಾರಿಗಳು ವಿವರಿಸುತ್ತಾರೆ.

ಸಂಚಾಲನ ಸಮಿತಿ ರಚನೆ: ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಗದಗ, ರೋಣ ಮತ್ತು ಶಿರಹಟ್ಟಿ ತಾಲೂಕು ಗಳಿಗೆ ಸೇರಿದ ಒಟ್ಟು 11 ಗ್ರಾಮಗಳ 20 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಆರ್​ಡಿಪಿಆರ್​ಯುು ಕುಲಸಚಿವರ ಅಧ್ಯಕ್ಷತೆಯಲ್ಲಿ ಸಂಚಾಲನ ಸಮಿತಿ ರಚನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಮಿತಿಯು ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಲಿದೆ.

ದತ್ತು ಪಡೆದ ಶಾಲೆಗಳ ಅಭಿವೃದ್ಧಿಗಾಗಿ ಆರ್​ಡಿಪಿಆರ್ ವಿವಿಯಲ್ಲಿ ಆಂತರಿಕ ಉಪಸಮಿತಿ ರಚಿಸಿ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ. ಶಾಲೆಗಳಲ್ಲಿನ ಪ್ರಸ್ತುತ ಸಮಸ್ಯೆ ಅರಿಯಲಾಗುತ್ತಿದೆ. ಜತೆಗೆ ಶೈಕ್ಷಣಿಕ ಚಟುವಟಿಕೆ, ಶಾಲೆ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣ ನೀಡುವುದು ಹೇಗೆ ಎಂಬುದರ ಕುರಿತು ಚಿಂತನೆ ನಡೆಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಬಿ.ಎಲ್. ಲಕ್ಕಣ್ಣವರ, ಕುಲಸಚಿವ, ಆರ್​ಡಿಪಿಆರ್​ಯುು, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net