

ಶಿವಮೊಗ್ಗ: ನೂತನ ಬ್ರಿಗೇಡ್ ರಚನೆ ಸಂಬಂಧ ಅ.20ರಂದು ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಚಿಂತನ-ಮಂಥನ ಸಮಾವೇಶ ಹಮ್ಮಿಕೊಂಡಿದ್ದು, ಯಾವ ಹೆಸರು ನಾಮಕರಣ ಮಾಡಬೇಕೆಂಬುದನ್ನು ಸಮಾವೇಶದಲ್ಲಿ ತೀರ್ಮಾನಿಸಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಮಾವೇಶದಲ್ಲಿ ಉತ್ತರ ಕರ್ನಾಟಕದ ಸುಮಾರು 2,500 ಮಂದಿ ಭಾಗವಹಿಸಲಿದ್ದಾರೆ. ಸಾಧು ಸಂತರು ಉಪಸ್ಥಿತರಿದ್ದು, ಬ್ರಿಗೇಡ್‌ಗೆ ಹೆಸರು ಸೂಚಿಸಲಿದ್ದಾರೆ. ನನ್ನ ಪ್ರಯತ್ನಕ್ಕೆ ರಾಜ್ಯವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ಹಿಂದೆ ನಾನು ರಾಯಣ್ಣ ಬ್ರಿಗೇಡ್ ಮಾಡಿದಾಗಲೂ ಇಂಥದ್ದೇ ಪ್ರೋತ್ಸಾಹ ಸಿಕ್ಕಿತ್ತು. ಇದೊಂದು ಪಕ್ಷಾತೀತ ಹಾಗೂ ಜಾತ್ಯತೀತ ಸಂಘಟನೆಯಾಗಿರಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಿಗ್ರೇಡ್ ರಾಜಕೀಯ ಸಂಘಟನೆ ಅಲ್ಲ. ಈ ಹಿಂದೆ ಪಕ್ಷದ ಪ್ರಮುಖರ ಮಾತಿಗೆ ಬೆಲೆ ಕೊಟ್ಟು ರಾಯಣ್ಣ ಬ್ರಿಗೇಡ್ ನಿಷ್ಕ್ರಿಯಗೊಳಿಸಿದ್ದೆ. ಆಗ ತಪ್ಪು ಮಾಡಿದೆ ಎಂದು ಈಗ ಅನುಭವವಾಗಿದೆ. ಹೊಸ ಬ್ರಿಗೇಡ್ ಅನ್ನು ಬ್ರಹ್ಮ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ. ಸಾಧು-ಸಂತರೇ ಇದರ ನಾಯಕತ್ವ ವಹಿಸುತ್ತಾರೆ ಎಂದರು.
ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ರಮೇಶ್, ಕುಬೇರಪ್ಪ, ಜಗದೀಶ್, ಮೋಹನ್ ಜಾಧವ್, ಶಂಕರನಾಯ್ಕ, ಸುನೀಲ್, ಎಂ.ಜಿ.ಬಾಲು ಇತರರಿದ್ದರು.