ರಾಜ್ಯಕ್ಕೆ ಇನ್ನೂ 20 ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆ

ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಮಂಗಳೂರು ಇದರ 20 ಕೋಟಿ ರೂ. ವೆಚ್ಚದ ನೂತನ ಹವಾನಿಯಂತ್ರಿತ ಕಟ್ಟಡವನ್ನು ಇಲಾಖೆ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಉದ್ಘಾಟಿಸಿದರು. ಎಂಎಲ್‌ಸಿಗಳಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ ಇದ್ದರು.
ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಮಂಗಳೂರು ಇದರ 20 ಕೋಟಿ ರೂ. ವೆಚ್ಚದ ನೂತನ ಹವಾನಿಯಂತ್ರಿತ ಕಟ್ಟಡವನ್ನು ಇಲಾಖೆ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಉದ್ಘಾಟಿಸಿದರು. ಎಂಎಲ್‌ಸಿಗಳಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಶರಣ ಪ್ರಕಾಶ್ ಪಾಟೀಲ್ ಘೋಷಣೆ
  • ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಕಟ್ಟಡ ಉದ್ಘಾಟನೆ
  • 20 ಕೋಟಿ ರೂ. ವೆಚ್ಚದ ಕಟ್ಟಡ, 10 ಕೋಟಿ ವೆಚ್ಚದಲ್ಲಿ ಸಲಕರಣೆಗಳು ಬರಲಿವೆ

ಮಂಗಳೂರು: ಉದ್ಯೋಗಾಧಾರಿತ ಕೌಶಲ್ಯ ವೃದ್ಧಿಗೆ ಮಂಗಳೂರು ಸಹಿತ ರಾಜ್ಯದಲ್ಲಿ ಪ್ರಸ್ತುತ 8 ಕಡೆಗಳಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆ (GTTC) ಕಾರ್ಯನಿರ್ವಹಿಸುತ್ತಿದೆ. 10 ಹೊಸ ಕೇಂದ್ರಗಳಿಗೆ ಸಿಎಂ ಅನುಮೋದನೆ ನೀಡಿದ್ದಾರೆ. ಬೇಡಿಕೆಯ ಹಿನ್ನೆಲೆಯಲ್ಲಿ ಇನ್ನೂ 10 ಸೇರಿದಂತೆ ರಾಜ್ಯಾದ್ಯಂತ 20 ಹೊಸ GTTC ಕೇಂದ್ರಗಳನ್ನು ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ಹೇಳಿದರು.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (KGMSDC) ಸೊಸೈಟಿ ಆಶ್ರಯದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಮಂಗಳೂರು ಇದರ 20 ಕೋಟಿ ರೂ. ವೆಚ್ಚದ ನೂತನ ಹವಾನಿಯಂತ್ರಿತ ಕಟ್ಟಡವನ್ನು ಕದ್ರಿಹಿಲ್ಸ್‌ನ ಸರಕಾರಿ ITI ಆವರಣದಲ್ಲಿ ಉದ್ಘಾಟಿಸಿ ಸಚಿವರು ಮಾತನಾಡಿದರು.

ಮಂಗಳೂರಿನ KGTTI ಕಟ್ಟಡ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇನ್ನು ಸಲಕರಣೆಗಳ ಖರೀದಿಗೆ 10 ಕೋಟಿ ರೂ. ಮಂಜೂರಾಗಿದೆ. ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಸಲಕರಣೆಗಳೂ ಮಂಗಳೂರು KGTTIಗೆ ಬರಲಿವೆ ಎಂದರು.

ಮಂಗಳೂರಿನಲ್ಲಿ ಉದ್ಯೋಗ ಮೇಳ

ಕರಾವಳಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶಗಳಿವೆ. ಬೆಂಗಳೂರು, ಕಲಬುರಗಿ, ಮೈಸೂರು, ಬಿಜಾಪುರ ಜಿಲ್ಲೆಗಳಲ್ಲಿ ಈಗಾಗಲೇ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಭಾಗವಹಿಸಿದ್ದ 1.50 ಲಕ್ಷ ಮಂದಿಯಲ್ಲಿ ಸುಮಾರು 30 ಸಾವಿರ ಮಂದಿ ಸ್ಥಳದಲ್ಲೇ ಉದ್ಯೋಗ ಪಡೆದುಕೊಂಡಿದ್ದಾರೆ. ಹಾಗಾಗಿ ಮಂಗಳೂರಿನಲ್ಲಿಯೂ ಇಲಾಖೆಯ ವತಿಯಿಂದ ಉದ್ಯೋಗ ಮೇಳದ ಆಯೋಜನೆಗೆ ಚಿಂತಿಸಲಾಗಿದೆ ಎಂದು ಸಚಿವರು ಹೇಳಿದರು.

ದೀರ್ಘಾವಧಿ ಕೋರ್ಸ್‌ಗೂ ಆದ್ಯತೆ ನೀಡಿ

ಕೈಗಾರಿಕೆಗಳು, ತಜ್ಞರು, ಉದ್ಯಮಿಗಳ ಜೊತೆ ಸಮನ್ವಯತೆ ಸಾಧಿಸಿಕೊಂಡು ಅವರ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಬೇಕು. KGTTI ತರಬೇತಿ ಪಡೆದವರಿಗೆ ಜರ್ಮನ್, ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಉದ್ಯೋಗಕ್ಕೆ ಅವಕಾಶಗಳಿವೆ. KGTTI ತರಬೇತಿಯ ಬಗ್ಗೆ ಮಕ್ಕಳಿಗೆ ಮಾಹಿತಿಯ ಕೊರತೆ ಇದೆ. ಶೇ. 100 ಉದ್ಯೋಗಾಧಾರಿತ ಕೋರ್ಸ್ ಇದಾಗಿದ್ದು, ಬೇಡಿಕೆ ಇದೆ. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಾಗಿದೆ. ಕೇವಲ ಎಸಿ, ರೆಫ್ರಿಜರೇಟರ್‌ನಂತಹ ಅಲ್ಪಾವಧಿ ಮಾತ್ರವಲ್ಲದೆ ದೀರ್ಘಾವಧಿಯ ಎಲೆಕ್ಟ್ರಿಕಲ್ ಎನರ್ಜಿ ಮ್ಯಾನೇಜ್‌ಮೆಂಟ್‌ನಂತಹ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್, ಮಾಜಿ ಕಾರ್ಪೊರೇಟರ್ ಶಕೀಲಾ ಕಾವ, ಮಂಗಳೂರು KGTTIನ ನಿರ್ದೇಶಕ ಗಿರಿಧರ ಸಾಲಿಯಾನ್ ಉಪಸ್ಥಿತರಿದ್ದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಆಯುಕ್ತೆ ಶಿಲ್ಪಾ ಎಂ. ಸ್ವಾಗತಿಸಿದರು. KGMSDC ಬೆಂಗಳೂರಿನ ಜಂಟಿ ಕಾರ್ಯದರ್ಶಿ ಬಿ.ಎಸ್. ರಘುಪತಿ ವಂದಿಸಿದರು.ಕೌಶಲ್ಯಾಭಿವೃದ್ಧಿಯ 10 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net