20 ಲಕ್ಷ ರೂ. ಮೌಲ್ಯದ ಕಟ್ಟಿಗೆ ವಶ

transporting timber
Published on

ಮುಂಡಗೋಡ: ಪಟ್ಟಣದ ಕಟ್ಟಿಗೆ ಡಿಪೋದಿಂದ ಅಕ್ರಮವಾಗಿ ಶಿರಸಿಗೆ ಕಟ್ಟಿಗೆ ಸಾಗಿಸುತ್ತಿದ್ದ 2 ಲಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಎಕ್ಕಂಬಿ ಚೆಕ್‌ಪೋಸ್ಟ್ಟ್‌ನಲ್ಲಿ ಶುಕ್ರವಾರ ರಾತ್ರಿ ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.

ಮುಂಡಗೋಡ ಗಣೇಶನಗರದ ಕಲ್ಲಪ್ಪ ಬಸಪ್ಪ ಕೆಂಗಾಪುರ, ದೇಶಪಾಂಡೆ ನಗರದ ಹೈದರಲಿ ಮಹ್ಮದ್ ಹನೀಫ್ ಫಾರಿ, ಗುಲಾಮಹುಸೇನ್ ಎಂ. ಗಾಜಿಪುರ, ಮಹ್ಮದಸೋಹೆಲ್ ಅಬ್ದುಲ್‌ಮುತಾಬಲಿ ಶೇಖ್ ಬಂಧಿತರು.

ಪಟ್ಟಣದ ಹೊರವಲಯದಲ್ಲಿರುವ ಮರಮಟ್ಟು ಸಂಗ್ರಹಾಲಯ (ಕಟ್ಟಿಗೆ ಡೀಪೋ)ದಿಂದ ಮತ್ತಿ, ಕಿಂದಾಳ, ದಾಮನ್ ಜಾತಿಯ ಕಟ್ಟಿಗೆಯನ್ನು ಶಿರಸಿಯ ಪದ್ಮಾವತಿ ವುಡ್ ಆ್ಯಂಡ್ ಫರ್ನಿಚರ್ ಸಾಮಿಲ್‌ಗೆ ಸಾಗಿಸಲಾಗುತ್ತಿತ್ತು.

ಎರಡು ಲಾರಿಗಳಲ್ಲಿ ಪರವಾನಗಿಗಿಂತ ಹೆಚ್ಚಿನ ಪ್ರಮಾಣದ ಕಟ್ಟಿಗೆಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶಿರಸಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 20 ಲಕ್ಷಕ್ಕೂ ಅಧಿಕ ಮೌಲ್ಯದ ಸಾಗವಾನಿ, ದಾಮನ್, ಕಿಂದಳ, ಮತ್ತಿ ಜಾತಿಯ ಕಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.

ಅರಣ್ಯ ಇಲಾಖೆ ಮಾಹಿತಿ ಪ್ರಕಾರ 7 ಮೀಟರ್ ಕಟ್ಟಿಗೆ ಪಾಸ್‌ನಲ್ಲಿ ಅಕ್ರಮವಾಗಿ 20 ಮೀಟರ್ ಹೆಚ್ಚಿನ ಪ್ರಮಾಣದ ಕಟ್ಟಿಗೆಯನ್ನು ಸಾಗಾಟ ಮಾಡಲಾಗುತ್ತಿತ್ತು. ಕಟ್ಟಿಗೆ ಡಿಪೋದ ಅಧಿಕಾರಿಯೊಬ್ಬರು ತಾವೇ ಮುಂದೆ ನಿಂತು ಕಟ್ಟಿಗೆಯನ್ನು ಎರಡು ಲಾರಿಗಳಲ್ಲಿ ಹೇರಿಸಿಕೊಂಡು ಹೋಗಿದ್ದಾರೆ ಎಂದು ಡಿಪೋದಲ್ಲಿನ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ಎಸಿಎಎಫ್ ಅಶೋಕ ಅಲಗೂರ, ಎಸ್.ಎಂ. ವಾಲಿ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಶಿವಾನಂದ ನಿಂಗಾಣಿ, ಸಿಬ್ಬಂದಿ ಧನಂಜಯ ನಾಯ್ಕ, ರಾಜೇಶ ಕೋಟಾರಕರ, ಮಾಲತೇಶ ಬಾರ್ಕಿ, ಹನುಮಂತ ಯರಗೇರಿ, ಮಹೇಶ ಕಂಬಾರ, ಸುರೇಶ ಬಿರಾದಾರ, ರೋಹಿತ್ ನಾಯ್ಕ, ಮಾಲತೇಶ ಎಸ್.ಕೆ. ದಾಳಿಯಲ್ಲಿ ಭಾಗವಹಿಸಿದ್ದರು.

ಕಟ್ಟಿಗೆ ಡಿಪೋದಿಂದ ಅಕ್ರಮವಾಗಿ ಸಾಗವಾನಿ, ಮತ್ತಿ, ದಾಮನ್, ಕಿಂದಳ ಜಾತಿಯ ಅಂದಾಜು 20 ಲಕ್ಷ ಮೌಲ್ಯದ ಕಟ್ಟಿಗೆಯನ್ನು ಎರಡು ಲಾರಿಗಳಲ್ಲಿ ಶಿರಸಿಗೆ ಸಾಗಾಟ ಮಾಡಲು ಯತ್ನಿಸಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಡಿಪೋದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ. ಎಸ್.ಜಿ. ಹೆಗಡೆ, ಡಿಎಫ್‌ಒ ಯಲ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net