

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ 3 ದಿನಗಳ ಕಾಲ ಕೈಗೊಂಡ ಪ್ರವಾಸದಲ್ಲಿ ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ್ದು, 3 ಪ್ರತ್ಯೇಕ ವಿಷಯಕ್ಕೆ ಸಂಬಂಧಿಸಿ ಸ್ವಯಂ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಐತಿಹಾಸಿಕ ಕೆಲಗೇರಿ ಕೆರೆ, ನವಲೂರು ಕೆರೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಇವುಗಳ ಸ್ವಚ್ಛತೆ ಮತ್ತು ಅಭಿವೃದ್ಧಿಗೆ 20 ದಿನಗಳ ಗಡವು ನೀಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಕೆರೆಗಳ ಅಭಿವೃದ್ಧಿ ಬಗ್ಗೆ ನಿರಂತರ ಮಾಹಿತಿ ಪಡೆಯಲಾಗುವುದು. ಅವುಗಳ ಅಭಿವೃದ್ಧಿ ಬಳಿಕವೇ ಪ್ರಕರಣ ಹಿಂಪಡೆಯಲಾಗುವುದು ಎಂದರು.
ನಗರ ಹೃದಯ ಭಾಗದಲ್ಲಿರುವ ಕಸಾಯಿಖಾನೆ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಪಕ್ಕದಲ್ಲೇ ಇರುವ ಥ್ಯಾಕರೆ ಸಮಾಧಿ ನಿರ್ವಹಣೆಯೂ ಆಗಿಲ್ಲ. ಕಸಾಯಿಖಾನೆಯನ್ನು ನಗರ ಹೊರಭಾಗಕ್ಕೆ ಸ್ಥಳಾಂತರಿಸಿ, ಆ ಜಾಗವನ್ನು ರಕ್ಷಿಸಿ ಜನರಿಗೆ ಜನರಿಗೆ ಉತ್ತಮ ವಾತಾವರಣ ನಿಮಿರ್ಸಬಹುದಾಗಿದೆ. ಈ ಕುರಿತು ಸ್ವಯಂ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿ ನಿಲಯಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಕುರಿತು ಸರ್ಕಾರ, ಸಂಬಂಧಪಟ್ಟ ಸಚಿವರಿಗೂ ವರದಿ ನೀಡಲಾಗುವುದು. ನಗರದಲ್ಲಿ ಪ್ರವಾಸ ಸಮಯದಲ್ಲಿ ಎಲ್ಲಿಯೂ ಸಮರ್ಪಕ ಚರಂಡಿ ವ್ಯವಸ್ಥೆ ಕಾಣದಿರುವುದು ಬೇಸರದ ಸಂಗತಿ. ಸ್ಥಳಿಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಚರಂಡಿ ನೀರು ನಿಲ್ಲುವುದರಿಂದ ಜನರಿಗೆ ಆರೋಗ್ಯ ತೊಂದರೆ ಉಂಟಾಗುವುದನ್ನು ಅರಿಯಬೇಕು ಎಂದರು.
ನಗರದಲ್ಲಿ ಸಂಗ್ರಹಿಸಿದ ತ್ಯಾಜ್ಯದ ಗುಡ್ಡೆ ನೋಡಿದರೆ 25 ವರ್ಷಗಳಿಂದ ತ್ಯಾಜ್ಯ ಬಿದ್ದಂತೆ ಕಾಣುತ್ತದೆ. ನಿರ್ವಹಣೆ ಸರಿ ಇಲ್ಲ. 4-5 ಯಂತ್ರಗಳಲ್ಲಿ ಸದ್ಯದ ಕಸ ಕರಗಿಸುವುದು ಅಸಾಧ್ಯ. ಇನ್ನಷ್ಟು ಯಂತ್ರ ಅಳವಡಿಸಿ ಶೀಘ್ರದಲ್ಲಿ ವಿಲೇ ಮಾಡಬೇಕು. ಪಕ್ಕದ ಸ್ಮಶಾನದಲ್ಲೂ ತ್ಯಾಜ್ಯ ಹಾಕಲಾಗುತ್ತಿದೆ. ಸ್ಮಶಾನದ ಅಳತೆ ಮಾಡಿ ಆ ಜಾಗದಲ್ಲಿ ಕಸ ಹಾಕದಂತೆ ಸೂಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಸ್ವರೂಪ ಟಿ.ಕೆ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಇದ್ದರು.