ಬೆಳೆ ವಿಮೆ ಪರಿಹಾರಕ್ಕೆ 20 ದಿನ ಗಡುವು

MND Former
Published on

ಮುಂಡಗೋಡ: ಉತ್ತರ ಕನ್ನಡ ಜಿಲ್ಲಾದ್ಯಂತ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಇಪ್ಪತ್ತು ದಿನದೊಳಗೆ ವಿತರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ವಿಮೆ ಕಂಪನಿಯ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳು ಮತ್ತು ರೈತರ ಸಭೆಯಲ್ಲಿ ರೈತ ಮುಖಂಡರು ಎಚ್ಚರಿಕೆ ನೀಡಿದರು.

ಜ.16ರಂದು ತಾಲೂಕಿನ ಮಳಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ತಹಸೀಲ್ದಾರ್ ಶಂಕರ ಗೌಡಿ ಅವರು ಈ ಬಗ್ಗೆ ಪ್ರತ್ಯೇಕವಾಗಿ ಸಭೆ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಬುಧವಾರ ಕೃಷಿ, ತೋಟಗಾರಿಕೆ, ಕಂದಾಯ, ಹೆಸ್ಕಾಂ, ಅರಣ್ಯ ಮತ್ತು ಕ್ಷೇಮಾ ವಿಮೆ ಕಂಪನಿಯ ಮುಖ್ಯಾಧಿಕಾರಿ ಜತೆ ಸಭೆ ನಡೆಸಲಾಯಿತು.

ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಬೆಳೆ ವಿಮೆ ವಿತರಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಯಾಕೆ ವಿತರಿಸುತ್ತಿಲ್ಲ? ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮಳೆಯಾಗಿ ಬೆಳೆ ಹಾನಿಯಾಗಿದೆ. ಹವಾಮಾನ ಇಲಾಖೆ ಮತ್ತು ನಿಮ್ಮ ನಡುವಿನ ತಿಕ್ಕಾಟದಿಂದ ರೈತರಿಗೆ ವಿಳಂಬವಾಗುತ್ತಿದೆ ಎಂದು ವಿಮೆ ಕಂಪನಿಯ ಅಧಿಕಾರಿ ಅಮರನಾಥ ರೆಡ್ಡಿ ಅವರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ವಿಮೆ ಅಧಿಕಾರಿ ಪ್ರತಿಕ್ರಿಯಿಸಿ, ಹವಾಮಾನ ಇಲಾಖೆ ನೀಡಿರುವ ವರದಿಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಇದರಿಂದಾಗಿ ವಿಳಂಬವಾಗಿದೆ ಎಂದಾಗ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಮಳೆ ಮಾಪನ ಅಧಿಕಾರಿಗಳು ಸರಿಯಾದ ವರದಿ ನೀಡಿದ್ದಾರೆ. ರೈತರಿಗೆ ಹೆಚ್ಚು ವಿಮೆ ನೀಡಬೇಕಾಗುತ್ತದೆ ಎಂದು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದೀರಿ. ಇನ್ನು ಎಷ್ಟು ದಿನಗಳ ಒಳಗಾಗಿ ರೈತರಿಗೆ ಬೆಳೆವಿಮೆ ನೀಡುತ್ತೀರಿ ಎಂದು ಪಟ್ಟುಹಿಡಿದರು. ಆಗ ಇಪ್ಪತ್ತು ದಿನಗಳ ಸಮಯವನ್ನು ವಿಮೆ ಅಧಿಕಾರಿ ಕೇಳಿದರು.

ವಿವಿಧ ಇಲಾಖೆಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆಸಲಾಯಿತು.ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕೋಳೂರ, ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ರಾಘವೇಂದ್ರ ಕಿರವತ್ತಿ, ಹಾಲಪ್ಪ ಕೋಡಣ್ಣನವರ, ಜಗದೀಶ ಕ್ಯಾದಗಿಕೊಪ್ಪ, ಮರದನಸಾಬ ಜನಗೇರಿ, ರಾಜು ನಾಯ್ಕ, ಜಾಕೀರ ದಾಸನಕೊಪ್ಪ, ಶಿವಾಜಿ ಬೆಕ್ಕೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net