

ಶಿರಸಿ: ರೈತರ ನಿರೀಕ್ಷೆಯಂತೆ 2019-20ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಡಕೆ ಹಾಗೂ ಕಾಳು ಮೆಣಸು ಕ್ಷೇತ್ರಕ್ಕೆ ಸಂಬಂಧಿಸಿ ಪ್ರಥಮ ಕಂತು 20.51 ಕೋಟಿ ರೂಪಾಯಿ ವಿಮಾ ಕಂಪನಿಯಿಂದ ಕೆಡಿಸಿಸಿ ಬ್ಯಾಂಕಿನ ಮೂಲಕ ರೈತರ ಖಾತೆಗೆ ಜಮಾ ಆಗಿದೆ. ವಿಮಾ ಯೋಜನೆಯಡಿ ಅಡಕೆ, ಕಾಳುಮೆಣಸು ಕ್ಷೇತ್ರಕ್ಕೆ ಕೆಡಿಸಿಸಿ ಬ್ಯಾಂಕ್, ಸಹಕಾರ ಸಂಘಗಳ ಮೂಲಕ ಒಟು 37,221 ರೈತ ಸದಸ್ಯರನ್ನು ಬೆಳೆ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅವರ ಪೈಕಿ ರೈತರು ಹೊಂದಿರುವ 72,903 ಸರ್ವೆ ನಂಬರ್ಗಳಿಗೆ ಒಟ್ಟು 44.57 ಕೋಟಿ ರೂ. ಬೆಳೆ ವಿಮೆ ಪರಿಹಾರ ಬರಬೇಕಿದೆ. ಅದರಲ್ಲಿ ರೈತರು ಹೊಂದಿರುವ 34,670 ಸರ್ವೆ ನಂಬರ್ಗಳಿಗೆ 20.51 ಕೋಟಿ ರೂ. ವಿಮಾ ಪರಿಹಾರದ ಮೊತ್ತ ನೇರವಾಗಿ ಡಿಸಿಸಿ ಬ್ಯಾಂಕ್ನಲ್ಲಿ ಹೊಂದಿರುವ ಆಧಾರ ಲಿಂಕ್ ಆದ ಉಳಿತಾಯ ಖಾತೆಗಳಿಗೆ ಜಮಾ ಆಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಯೋಜನೆಯ ಈ ಲಾಭವನ್ನು ರೈತರಿಗೆ ತಲುಪಿಸುವಲ್ಲಿ ಕೆಡಿಸಿಸಿ ಬ್ಯಾಂಕ್ ಸದಾ ಶ್ರಮಿಸುತ್ತದೆ ಮತ್ತು ಬೆಳೆವಿಮೆ ರೈತರಿಗೆ ಸಕಾಲದಲ್ಲಿ ಸಿಗುವಂತೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ತಾಲೂಕುವಾರು ಜಮಾ ಆದ ಬೆಳೆವಿಮೆ:
ಶಿರಸಿ 8.34 ಕೋ.ರೂ., ಸಿದ್ದಾಪುರ 3.14 ಕೋ.ರೂ., ಮುಂಡಗೋಡ 73 ಲಕ್ಷ ರೂ., ಯಲ್ಲಾಪುರ 5.58 ಕೋ.ರೂ., ಜೊಯಡಾ 61 ಲಕ್ಷ ರೂ., ಅಂಕೋಲಾ 94 ಲಕ್ಷ ರೂ., ಕುಮಟಾ 15 ಲಕ್ಷ ರೂ., ಹೊನ್ನಾವರ 82 ಲಕ್ಷ ರೂ., ಭಟ್ಕಳ 20 ಲಕ್ಷ ರೂ.
ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಬೆಳೆ ವಿಮಾ ಯೋಜನೆಯು ವರದಾನವಾಗಿದೆ. ಈ ವರ್ಷವೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭ ಪಡೆಯಲು ಅನುಕೂಲವಾಗುತ್ತದೆ.| ಶಿವರಾಮ ಹೆಬ್ಬಾರ ಜಿಲ್ಲಾ ಉಸ್ತುವಾರಿ ಸಚಿವ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ