

ಮಡಿಕೇರಿ: ರಾಜ್ಯ ರಾಜಕಾರಣದಲ್ಲಿ ಸಿದ್ದರಾಮೋತ್ಸವ ಆದ ಬಳಿಕ ಸಂಚಲನ ಸೃಷ್ಟಿಯಾಗಿದೆ. ಮುಂದಿನ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಬಿಜೆಪಿ, ಜೆಡಿಎಸ್‌ನವರು ಅರ್ಜಿ ಹಾಕಿದ್ದಾರೆ. ಸುಮಾರು ೨೦-೨೫ ಶಾಸಕರು ಕಾಂಗ್ರೆಸ್‌ಗೆ ಅಪ್ಲಿಕೇಶನ್ ಹಾಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಮಡಿಕೇರಿಯಲ್ಲಿ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಇರುವ ಖಚಿತ ಮಾಹಿತಿ ಪ್ರಕಾರ ೨೦-೨೫ ಜನ ೨ ಪಕ್ಷದಿಂದ ಬರುತ್ತಾರೆ. ಅವರು ಈಗಾಗಲೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಅನಧಿಕೃತವಾಗಿ ಭೇಟಿಯೂ ಮಾಡಿದ್ದಾರೆ. ಅದರಲ್ಲಿ ಬಿಜೆಪಿಯ ೯ ಹಾಗೂ ಜೆಡಿಎಸ್‌ನ ೧೧ ಹಾಲಿ ಹಾಗೂ ಮಾಜಿ ಶಾಸಕರು ಇದ್ದಾರೆ. ಅವರು ಅಧಿಕೃತವಾಗಿ ಅರ್ಜಿ ಹಾಕಿದ ಮೇಲೆ ಅದನ್ನು ಸಮಿತಿಗೆ ಕಳುಹಿಸುತ್ತೇವೆ. ಸಮಿತಿ ಅವರನ್ನು ತೆಗೆದುಕೊಳ್ಳಬೇಕೋ ಬೇಡವೋ ಅಂತ ನಿರ್ಧಾರ ಮಾಡುತ್ತದೆ ಎಂದರು.
ಎಚ್.ಡಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ನಾವು ಮಾಡಿದ್ದು ಎಂದು ಹೇಳುತ್ತಾರೆ. ಆದರೆ ಕಾಂಗ್ರೆಸ್ ಶಾಸಕರ ಸಹಕಾರದಿಂದ ಸಾಲ ಮನ್ನಾ ಮಾಡಲಾಗಿದೆ. ಕುಮಾರಸ್ವಾಮಿ ತಾಜ್ ಹೋಟೆಲ್‌ನಲ್ಲಿದ್ದುಕೊಂಡು ಆಡಳಿತ ನಡೆಸಿದ್ದರು. ಆದರಿಂದಲೇ ಶಾಸಕರು ಬೇರೆ ಪಕ್ಷಕ್ಕೆ ವಲಸೆ ಹೋದರು ಎಂದು ಟಾಂಗ್ ನೀಡಿದರು.