

ಚಿತ್ರದುರ್ಗ: ಹಿರಿಯೂರು ತಾಲೂಕು ಮದ್ದನಕುಂಟೆ ಗ್ರಾಮದಲ್ಲಿ ಅಂದಾಜು 2 ಸಾವಿರ ವರ್ಷಗಳ ಹಿಂದಿನ ಮೆಗಲಾಥಿಕ್ ಸಂಸ್ಕೃತಿ ಕಾಲದ ಬೃಹತ್ ಶಿಲಾಸಮಾಧಿ ಪತ್ತೆಯಾಗಿದೆ. ಉಪನ್ಯಾಸಕ ಡಾ. ಮಹೇಶ್ ಕುಂಚಿಗನಾಳ್ ಮತ್ತವರ ತಂಡವು ಇತ್ತೀಚೆಗೆ ಗ್ರಾಮದಲ್ಲಿ ಕೈಗೊಂಡಿದ್ದ ಕ್ಷೇತ್ರ ಕಾರ್ಯದ ವೇಳೆ ಈ ಶಿಲಾಸಮಾಧಿ ದೊರಕಿದೆ.
ಇದನ್ನು ಸ್ಥಳೀಯ ವೃತ್ತಕಾರದ ಕಾಡುಗಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಸಮಾಧಿ ಒಂದು ಪಾರ್ಶ್ವದಲ್ಲಿ ಕಾಡುಗಲ್ಲಿಂದ 5-6 ಅ ಡಿ ಎತ್ತರದ ನಿಲುಸುಗಲ್ಲು ನಿಲ್ಲಿಸಲಾಗಿದೆ. ಸಮಾಧಿ ಅಂದಾಜು 15 ಅಡಿ ವ್ಯಾಸ ಹೊಂದಿದೆ. ಇದು ಕಬ್ಬಿಣ ಯುಗದ ಕಾಲದ ಮಾನವರು ನಿರ್ಮಿಸಿದ ಡಾಲ್‌ಮನ್ ಮಾದರಿ ಸಿಸ್ಟ್ ಸಮಾಧಿಯಾಗಿದೆ ಎಂದು ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.
ವಿಜಯನಗರ ಕಾಲದ ಹನುಮನ ಶಿಲಾಮೂರ್ತಿ ಹಾಗೂ ಎರಡು ವೀರಗಲ್ಲುಗಳಿವೆ. ನಿಲುಸುಗಲ್ಲುಗಳ ಅಂತ್ಯಕ್ರಿಯೆ ಗುರುತಿಸಲು ನಿಲ್ಲಿಸಲಾಗಿರುತ್ತದೆ ಎಂದು ಮಹೇಶ್ ತಿಳಿಸಿದ್ದಾರೆ. ಕ್ಷೇತ್ರಕಾರ್ಯದಲ್ಲಿ ಪ್ರಬುದ್ಧ, ಪ್ರತ್ಯುಷ್ಯ, ಲಕ್ಷ್ಮೀಶ ಭಾಗವಹಿಸಿದ್ದರು.