

ಬಾಗೇಪಲ್ಲಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧೀನದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ 2 ಸಾವಿರ ಮೂಟೆಗಳ ವ್ಯತ್ಯಾಸ ಕಂಡು ಬಂದಿದ್ದು, ಅವ್ಯವಹಾರದ ಶಂಕೆ ವ್ಯಕ್ತವಾಗಿದೆ. ಪಟ್ಟಣ ಠಾಣೆ ಪೊಲೀಸರು ಹೊರಗುತ್ತಿಗೆ ನೌಕರರನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ನಡೆದಿರುವ ದೂರುಗಳ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ತಹಸೀಲ್ದಾರ್ ಡಿ.ಎ.ದಿವಾಕರ್ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದು, ಅವ್ಯವಹಾರ ಬೆಳಕಿಗೆ ಬಂದಿದೆ. ಇಲ್ಲಿನ ಹೊರಗುತ್ತಿಗೆ ನೌಕರನಾದ ಕಂಪ್ಯೂಟರ್ ಅಪರೇಟರ್ ಹಜರುದ್ದೀನ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ದೂರು ನೀಡಲು, ಪ್ರಕರಣ ದಾಖಲಿಸಲು ವಿಳಂಬ:
ಶಾಸಕ ಹಾಗೂ ತಹಸೀಲ್ದಾರ್ ಪರಿಶೀಲನೆ ವೇಳೆ ಗೋಲ್ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಶನಿವಾರವೇ ಕಂಪ್ಯೂಟರ್ ಆಪರೇರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು, ಆದರೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು ಭಾನುವಾರ ಮಧ್ಯಾಹ್ನವಾದರೂ ದೂರು ನೀಡಲು ಹಿಂದೇಟು ಹಾಕಿದ್ದಾರೆ, ಕೊನೆಗೆ ಅಧಿಕಾರಿಗಳು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಅಕ್ರಮ ವ್ಯವಹಾರ: ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಲು ಕೃಷಿ ಇಲಾಖೆಯ ಪ್ರೂಟ್ ತಂತ್ರಾಂಶದಲ್ಲಿ ರೈತರು ಜಮೀನು ದಾಖಲೆ ಸಲ್ಲಿಸಿ, ಹೆಸರು ನೊಂದಾಯಿಸಿಕೊಳ್ಳಬೇಕು. ಆದರೆ, ಆರೋಪಿ ರಾಗಿ ಬೆಳೆ ಬೆಳೆಯದ ಇತರ ರೈತರಿಂದ ದಾಖಲೆಗಳನ್ನು ಸಂಗ್ರಹಿಸಿ, ಹೆಸರು ನೋಂದಾಯಿಸುತ್ತಿದ್ದಾನೆ, ರಾಗಿ ಖರೀದಿಸಿದ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ಹಣ ಲಪಟಾಯಿಸಲಾಗುತ್ತಿತ್ತು ಎನ್ನಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಇತ್ತೀಚೆಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ವ್ಯವಸ್ಥಾಪಕ ನಂಜಪ್ಪ ಕರೊನಾ ಸೋಂಕಿನಿಂದ ಮೃತಪಟ್ಟಿದ್ದು ರಾಗಿ ದಾಸ್ತಾನು ಗೋದಾಮಿನ ಉಸ್ತುವಾರಿ ವಹಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದೇ ಅಕ್ರಮ ಮತ್ತು ಭ್ರಷ್ಟಾಚಾರ ನಡೆಸಲು ಕಾರಣ ಎನ್ನಲಾಗುತ್ತಿದೆ. ಅಧಿಕಾರಿಗಳು ದೂರು ನೀಡಲು ಹಿಂದೇಟು ಹಾಕಿರುವುದು ನೋಡಿದರೆ ಅಕ್ರಮದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಸಮಗ್ರ ತನಿಖೆಯ ಒತ್ತಾಯ ಕೇಳಿ ಬಂದಿದೆ.