2 ಸಾವಿರ ಜನರ ಆರೋಗ್ಯ ತಪಾಸಣೆ, ಬಿಡ್ನಾಳದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಜೋಶಿ

Joshi health
Published on

ಹುಬ್ಬಳ್ಳಿ: ಮಾಜಿ ಪ್ರಧಾನಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಭಾನುವಾರ ಇಲ್ಲಿನ ಬಿಡ್ನಾಳದ ಆರ್.ಕೆ. ಪಾಟೀಲ ಪ್ರೌಢಶಾಲೆ ಆವರಣದಲ್ಲಿ ಬಿಜೆಪಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಹಾಗೂ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ ಸುಮಾರು 2 ಸಾವಿರ ಜನರ ತಪಾಸಣೆ ನಡೆಸಲಾಯಿತು.

ಅನೇಕ ಜನರಿಗೆ ಉಚಿತ ಔಷಧಗಳನ್ನು ವಿತರಿಸಲಾಯಿತು. ಕೋವಿಡ್ ಲಸಿಕೆ ನೀಡಲಾಯಿತು.

ಶಿಬಿರ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಕರೊನಾ ಮರುಕಳಿಸುತ್ತಿರುವುದರಿಂದ ವಿಶ್ವದ ಅನೇಕ ದೇಶಗಳು ತತ್ತರಿಸಿವೆ. ಆದರೆ, ಭಾರತದಲ್ಲಿ ಬಲಿಷ್ಠ ನಾಯಕತ್ವದಿಂದಾಗಿ ಕೋವಿಡ್ ಆತಂಕ ದೂರವಾಗಿದೆ. ಜನರಿಗೆ ಮೂಲ ಸೌಕರ್ಯ ಒದಗಿಸುವ ಕೆಲಸಗಳು ಭರದಿಂದ ಸಾಗಿವೆ. ಆಯುಷ್ಮಾನ್ ಭಾರತ ಯೋಜನೆಯಿಂದಾಗಿ ಅನೇಕ ಬಡ ಕುಟುಂಬಗಳಿಗೆ ಪ್ರಯೋಜನವಾಗಿದೆ ಎಂದರು.

ಭಾರತ ಕಂಡ ಅಪರೂಪದ ರಾಜಕಾರಣಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಕವಿ ಮನಸ್ಸಿನ ಸಹೃದಯಿ. ಮೌಲ್ಯಾಧಾರಿತ ರಾಜಕಾರಣಕ್ಕೆ ಒತ್ತು ನೀಡಿದ್ದ ಅವರು ಜೀವನದುದ್ದಕ್ಕೂ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿದರು ಎಂದು ಸ್ಮರಿಸಿದರು.

ಬಾಲಾಜಿ ಆಸ್ಪತ್ರೆಯ ಚೇರ್ಮನ್ ಹಾಗೂ ರಾಜೀವಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಕ್ರಾಂತಿಕಿರಣ ಮಾತನಾಡಿ, ಶಿಬಿರದಲ್ಲಿ ಎಲ್ಲ ಬಗೆಯ ವೈದ್ಯಕೀಯ ತಪಾಸಣೆ ಮೂಲಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೇ ಬಿಡ್ನಾಳಕ್ಕೆ ತಂದಂತಾಗಿದೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗಲು ಕೋವಿಡ್ ವ್ಯಾಕ್ಸಿನೇಶನ್ ಸೌಲಭ್ಯ ಸಹ ಈ ಬಾರಿ ಅಳವಡಿಸಿಕೊಳ್ಳಲಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಎರಡೆತ್ತಿನ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಪೂರ್ವ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮುಖಂಡರಾದ ಜಯತೀರ್ಥ ಕಟ್ಟಿ, ಸಂತೋಷ ಅರಕೇರಿ, ವಿನಯ ಸಜ್ಜನರ, ರಾಜೇಶ ಅಡವಿ, ಹನುಮಂತ ದೊಡ್ಡಮನಿ, ನಿಂಗಪ್ಪ ಬಡಿಗೇರ, ರಾಜಶೇಖರಗೌಡ ಪಾಟೀಲ, ಬಸು ಹಿರೇಮಠ, ಸಿದ್ದು ಮೀಸಿ, ಗುರು ಈರಗಾರ, ಮಲ್ಲೇಶಪ್ಪ ಹೀರೂರು, ಗುರುಸಿದ್ದಪ್ಪ ಇಂಗಳಗಿ, ಶಿವರುದ್ರಗೌಡ ಪಾಟೀಲ, ವೈದ್ಯರಾದ ಡಾ. ಆನಂದ ಕೊಪ್ಪದ, ಡಾ. ಕೃಷ್ಣಮೂರ್ತಿ, ಡಾ. ಹರಿಕೃಷ್ಣ, ಡಾ. ಜಮಾದಾರ. ಡಾ. ಹನುಮಂತ ಬಿ.ವಿ, ಡಾ. ಸ್ಪಂದನಾ, ಡಾ. ಆಕಾಶ್, ಡಾ. ಸುಹಾಸ್, ಡಾ. ಲಕ್ಷ್ಮೀ, ಡಾ. ಭಾಗ್ಯಶ್ರೀ ಸೇರಿ 25ಕ್ಕೂ ಹೆಚ್ಚು ತಜ್ಞರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net