

ಕೊರಟಗೆರೆ: ತುಮಕೂರು ಅಥವಾ ನೆಲಮಂಗಲ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ಇದರ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಜತೆ ಚರ್ಚಿಸಿರುವೆ, ಬೇರೆ ಕಡೆ ಮಾಡೋಕೆ ಪ್ರಯತ್ನ ಪಟ್ಟರೆ ನಮಗೆ ಎಚ್ಎಎಲ್ ನಿಲ್ದಾಣವೇ ಸಾಕು ಅಂತೀವಿ. ರಾಜ್ಯ ಸರ್ಕಾರಕ್ಕೆ ನಾನು ಟ್ರಂಪ್ ಕಾರ್ಡ್ ಕೊಟ್ಟಿದ್ದೀನಿ ಎಂದು ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೊರಟಗೆರೆ ತಾಲೂಕು ಕೋಳಾಲದ 7 ಮತ್ತು ಕಸಬಾ ಹೋಬಳಿಯ 6 ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಕುಂದು&ಕೊರತೆ ಸಭೆ ಹಾಗೂ ಕೇಂದ್ರ ಸರ್ಕಾರದ ಯೋಜನೆಯಡಿ ಬರುವ ಲಾನುಭವಿಗಳಿಗೆ ವಿವಿಧ ಇಲಾಖೆಯ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಣಕಾಸು ಮಂತ್ರಾಲಯ ರಾಜ್ಯ ಸರ್ಕಾರಕ್ಕೆ 6310 ಕೋಟಿ ರೂ. ಬಿಡುಗಡೆ ಮಾಡಿದೆ. ತುಮಕೂರು ಜಿಲ್ಲೆಯ 4 ದಿಕ್ಕಿನಲ್ಲೂ ಅಂತಾರಾಷ್ಟ್ರೀಯ ಹೆದ್ದಾರಿಗಳಿವೆ. 40 ಸಾವಿರ ಎಕರೆ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪ್ರದೇಶ ಇದೆ. ತುಮಕೂರು ನಗರ ರಾಜಧಾನಿಗೆ ಹತ್ತಿರವಾಗಿ ಬೆಳೆಯುತ್ತಿದೆ ಎಂದರು. ಪ್ರಧಾನಿ ಮೋದಿ ನಮ್ಮ ರಾಜ್ಯದ ರೈಲ್ವೆ ಯೋಜನೆಗೆ 5300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. 2400 ಕೋಟಿ ರೂ. ವೆಚ್ಚದ ನೆಲಮಂಗಲ&ತುಮಕೂರಿನ 45 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಫೆಬ್ರವರಿಯಿಂದ ಪ್ರಾರಂಭವಾಗಲಿದೆ ಎಂದರು.
ತುಮಕೂರು ಜಿಲ್ಲೆಯ ಕೊಳವೆಬಾವಿಗಳ ನೀರಿನಲ್ಲಿ ್ಲೋರೈಡ್ ಅಂಶದ ಬಗ್ಗೆ 15 ದಿನಗಳ ಒಳಗೆ ಮಾಹಿತಿ ನೀಡಿ. ಕೇಂದ್ರದಿಂದ ಪ್ರತಿ ಗ್ರಾಮಕ್ಕೆ 2 ಶುದ್ಧ ಕುಡಿಯುವ ನೀರಿನ ಘಟಕ ತರುತ್ತೇನೆ. ಕೊಳವೆಬಾವಿಯ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ. ಬಡಜನರ ಜೀವನದ ಜತೆ ಚೆಲ್ಲಾಟ ಮಾಡಬೇಡಿ. 45 ವರ್ಷದ ರಾಜಕೀಯ ಅನುಭವ ಜಿಲ್ಲೆಯ ಅಭಿವೃದ್ಧಿಗೆ ಮಾತ್ರ ಮೀಸಲು. 2 ವರ್ಷ ನನಗೆ ಅವಕಾಶ ನೀಡಿ ಅಭಿವೃದ್ಧಿಯ ರೂಪುರೇಷೆ ಬದಲು ಮಾಡುತ್ತೇನೆ ಎಂದರು.ತುಮಕೂರು ಜಿಲ್ಲಾಡಳಿತ, ಕೊರಟಗೆರೆ ಆಡಳಿತ, ತಾಪಂ, ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿ ಹತ್ತಾರು ಇಲಾಖೆಗಳಿಂದ 300ಕ್ಕೂ ಅಧಿಕ ಪಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಬರುವ ವಿವಿಧ ಸೌಲಭ್ಯ ವಿತರಿಸಲಾಯಿತು. ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶಗೌಡ, ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಸದಸ್ಯ ಶಿವರಾಮಯ್ಯ, ಮಧುಗಿರಿ ಎಸಿ ಕೊಟ್ಟೂರು ಶಿವಪ್ಪ, ತಹಸೀಲ್ದಾರ್ ಕೆ.ಮಂಜುನಾಥ, ತಾಪಂ ಇಒ ಅಪೂರ್ವ, ಗ್ರಾಪಂ ಅಧ್ಯಕ್ಷ ನಟರಾಜ್ ಇದ್ದರು.
ನಾನು ಎಂಪಿ ಅನ್ನೋದನ್ನೇ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ. ಬಾಲಂಗೋಚಿಗಳ ಮಾತಿನಿಂದ ಅಧಿಕಾರಿ ವರ್ಗ ಎಡವಬೇಡಿ. ನಾನು ಇನ್ನು ಮುಂದೆ ತುಮಕೂರು ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಸಭೆ ಮಾಡೋದಿಲ್ಲ. ತಹಸೀಲ್ದಾರ್, ತಾಪಂ ಇಒ, ರೇಷ್ಮೆ, ಕೃಷಿ, ತೋಟಗಾರಿಕೆ ಸೇರಿ ಗ್ರಾಪಂ ಕಚೇರಿಯಲ್ಲಿ ಬಂದು ಕುಳಿತುಕೊಳ್ತೀನಿ, ನೆನಪಿರಲಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅಧಿಕಾರಿಗಳೇ ಜಲಜೀವನ್ ಮೀಷನ್ ಕೇಂದ್ರ ಸರ್ಕಾರದ ಯೋಜನೆ ಅಲ್ಲವೇ?. ನಾನು ಕೇಂದ್ರ ಜಲಶಕ್ತಿ ಮಂತ್ರಿ ಎಂಬುದೇ ನಿಮಗೆ ಗೊತ್ತಿಲ್ಲವಾ? ತುಮಕೂರು ಜಿಲ್ಲೆಗೆ 2 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ಬಂದಿದೆ. ಒಂದೇ ಒಂದು ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ೋಟೋ ಹಾಕಿಲ್ಲ ಏಕೆ? ಮುಂದಿನ ಸಲ ನಾನು ಮಾತಿನಲ್ಲಿ ಹೇಳೋದಿಲ್ಲ, ಪೆನ್, ಪೇಪರ್ ಹಿಡಿತೀನಿ ನೆನಪಿರಲಿ. ವಿನಂತಿ ಮಾಡೋದು ನನ್ನ ವಿಕ್ನೇಸ್ ಅಂದುಕೊಳ್ಳಬೇಡಿ. ಇಷ್ಟೇ ಈತನ ಯೋಗ್ಯತೆ ಅಂದುಕೊಂಡ್ರೆ ನನ್ನ ಬಳಿ ಇನ್ನೂ ಬೇಕಾದಷ್ಟು ಬಾಂಬುಗಳಿವೆ
ಎಂದು ವಿ.ಸೋಮಣ್ಣ ಎಚ್ಚರಿಕೆ ನೀಡಿದರು.
ಭದ್ರಾ ಮೆಲ್ದಂಡೆ ಯೋಜನೆಗೆ ಮೋದಿ ಅನುಮತಿ ನೀಡಿದ್ದಾರೆ. ಈ ಯೋಜನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅನುಮತಿ ಕೋಟ್ರಾ? ನೀವೇ ಹೇಳಿ. ಪ್ರಧಾನಿ ಮೋದಿ ಅಭಿವೃದ್ಧಿಯ ವಿಚಾರದಲ್ಲಿ ಯಾವ ರಾಜ್ಯಕ್ಕೂ ತಾರತಮ್ಯ ಮಾಡೋದಿಲ್ಲ. ಡಿಸಿಎಂ ಅವರು ನೀರಾವರಿ ಯೋಜನೆಯ ಕಾಮಗಾರಿ ರೂಪುರೇಷೆ ಬಗ್ಗೆ ಗಮನ ಹರಿಸಲಿ.| ವಿ.ಸೋಮಣ್ಣ ಕೇಂದ್ರ ಸಚಿವ