2 ವರ್ಷ ಅನುದಾನ ಕೇಳಬೇಡಿ

18 smg 16
Published on

ಶಿವಮೊಗ್ಗ: ಕರೊನಾ ವೈರಸ್ ಸಂಕಷ್ಟ ಕಾರಣ ಮುಂದಿನ 2 ವರ್ಷ ಯಾವುದೇ ಹೊಸ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ನಿರೀಕ್ಷಿಸುವಂತಿಲ್ಲ. ಬಿಡುಗಡೆಯಾಗಿರುವ ಅನುದಾನದಲ್ಲೇ ಮೆಗ್ಗಾನ್ ಬೋಧನಾ ಆಸ್ಪತ್ರೆ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.

ಸಿಮ್್ಸ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಅವರು, ಹೊಸ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಬಹುದು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ನಿರೀಕ್ಷೆ ಮಾಡುವಂತಿಲ್ಲ ಎಂದರು.

ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಗುಣಮಟ್ಟ ಕಾಪಾಡಿಕೊಂಡು ಪೂರ್ಣಗೊಳಿಸಬೇಕು. ಆಗಸ್ಟ್ 1ರೊಳಗೆ ಎಲ್ಲ ಪೂರ್ವ ನಿಯೋಜಿತ ಕಾಮಗಾರಿಗಳನ್ನು ಮುಗಿಸಬೇಕು ಎಂದು ಇಂಜಿನಿಯರ್​ಗಳಿಗೆ ತಾಕೀತು ಮಾಡಿದರು.

ಯಾವುದೇ ಕಾರಣಕ್ಕೂ ರೋಗಿಗಳಿಗೆ ಹೊರಗಿನಿಂದ ಔಷಧ ತರಿಸಲು ಚೀಟಿ ಬರೆಯಬಾರದು. ಒಂದು ವೇಳೆ ಅನಿವಾರ್ಯವಾಗಿ ಚೀಟಿ ಬರೆದರೂ ಬಿಪಿಎಲ್ ಕಾರ್ಡದಾರರಿಗೆ ಆ ಮೊತ್ತವನ್ನು ಮರುಪಾವತಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಇರುವ ರೀತಿ ಲಭ್ಯವಿರುವ ವೈದ್ಯರ ಹೆಸರು ಸಮಯ ಇತ್ಯಾದಿಗಳ ವಿವರಗಳು ಎಲ್​ಇಡಿ ಪರದೆಯಲ್ಲಿ ಪ್ರಚುರಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸಿಮ್್ಸ ನಿರ್ದೇಶಕರಿಗೆ ಸೂಚಿಸಿದರು.

13 ಪ್ರಯೋಗಾಲಯ ನವೀಕರಣ: ಸಿಮ್ಸ್​ನಲ್ಲಿರುವ 13 ಪ್ರಯೋಗಾಲಯಗಳನ್ನು 1.21 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದ್ದು, 5 ಪ್ರಯೋಗಾಲಯಗಳ ನವೀಕರಣ ಪೂರ್ಣಗೊಂಡಿದೆ. 1.90 ಕೋಟಿ ರೂ. ವೆಚ್ಚದಲ್ಲಿ ಶರಾವತಿ ಬ್ಲಾಕ್ ಕಟ್ಟಡ ನವೀಕರಣ, 1.65 ಕೋಟಿ ರೂ. ವೆಚ್ಚದಲ್ಲಿ 3 ಬೋಧನಾ ಕೊಠಡಿ, 4.5 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್​ಲ್ಯಾಬ್​ಗೆ ಉಪಕರಣಗಳನ್ನು ಖರೀದಿಸಲು ಟೆಂಡರ್ ಮಾಡಲಾಗಿದೆ. 5.32ಕೋಟಿ ರೂ. ವೆಚ್ಚದಲ್ಲಿ ಗೃಹ ವೈದ್ಯರ ವಸತಿ ನಿಲಯ ಕಟ್ಟಡ ಕಾಮಗಾರಿ ಚಾಲನೆಯಲ್ಲಿದೆ. 2.16 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮರಣೋತ್ತರ ಪರೀಕ್ಷಾ ಕೇಂದ್ರ, ಉಪಕರಣ ಮತ್ತು ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ವಣ, 21.50 ಕೋಟಿ ರೂ. ವೆಚ್ಚದಲ್ಲಿ ಎಂಸಿಎಚ್ ಬ್ಲಾಕ್ ನಿರ್ವಣ, 12.49 ಕೋಟಿ ರೂ. ವೆಚ್ಚದಲ್ಲಿ ಎಂಸಿಎಚ್ ಬ್ಲಾಕ್​ಗೆ ಉಪಕರಣ ಖರೀದಿಗೆ ಪ್ರಕ್ರಿಯೆ ನಡೆಸಲಾಗಿದೆ ಎಂದು ಸಿಮ್್ಸ ಆಡಳಿತಾಧಿಕಾರಿ ಡಾ. ಶಿವಕುಮಾರ್ ಮಾಹಿತಿ ನೀಡಿದರು.

ಜಿಪಂ ಸಿಇಒ ಎಂ.ಎಲ್.ವೈಶಾಲಿ, ಸಿಮ್್ಸ ನಿರ್ದೇಶಕ ಡಾ. ಒ.ಎಸ್.ಸಿದ್ದಪ್ಪ, ಆಡಳಿತ ಮಂಡಳಿ ಸದಸ್ಯರಾದ ಡಾ. ಗೌತಮ್ ದಿವಾಕರ ಶೆಟ್ಟಿ, ಜಿಲ್ಲಾ ಸರ್ಜನ್ ಡಾ. ರಘುನಂದನ್, ವೈದ್ಯಕೀಯ ಅಧೀಕ್ಷಕ ಡಾ. ವಿರೂಪಾಕ್ಷಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net