

ಬೀದರ್: ಜಿಲ್ಲೆಯಲ್ಲಿ 2 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3.30 ಲಕ್ಷ ಮನೆಗಳಿಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 105 ಬೂತ್ ಗಳಿದ್ದು, 2010 ಸಿಬ್ಬಂದಿ ಭಾಗಿಯಾಗಿದ್ದಾರೆ. ಅಭಿಯಾನ ಯಶಸ್ಸಿಗೆ ವಿವಿಧ ಸಂಘ ಸಂಸ್ಥೆಗಳ ಸಹಾಯ ಮತ್ತು ಸಹಕಾರ ಪಡೆದುಕೊಳ್ಳಲಾಗುತ್ತಿದೆ ಎಂದರು.
ಶಾಸಕ ರಹೀಮ್ ಖಾನ್ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಯಾವುದೇ ರೀತಿಯ ಪೋಲಿಯೋ ಪ್ರಕರಣಗಳಿಲ್ಲ. ಆದರೆ ಬರುವ ದಿನಗಳಲ್ಲಿ ಇಂಥ ಪ್ರಕರಣ ಮರುಕಳಿಸದಿರಲಿ ಎಂಬ ಉದ್ದೇಶದಿಂದ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಮೊದಲನೇ ದಿನ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ನಡೆದಿದೆ. ಸೋಮವಾರದಿಂದ ಮೂರು ದಿನ ಮನೆ ಮನೆಗೆ ಹೋಗಿ ಲಸಿಕೆ ಹಾಕಲಾಗುವುದು ಎಂದರು.
ಡಿಎಚ್ಒ ಡಾ.ವಿ.ಜಿ. ರೆಡ್ಡಿ, ಆರ್ಸಿಎಚ್ ಡಾ.ಮಹೇಶ ಬಿರಾದಾರ, ಕಾರ್ಯಕ್ರಮ ಅಧಿಕಾರಿ ಡಾ.ಕೃಷ್ಣಾ ರೆಡ್ಡಿ, ಡಾ.ಅನೀಲ ಚಿಂತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ, ಬಸವರಾಜ ಧನ್ನೂರ, ಡಾ.ಸೋಯಲ್ ಇತರರಿದ್ದರು.