2 ದಿನದಲ್ಲಿ 421 ಮಂದಿಗೆ ಪಾಸಿಟಿವ್!

corona
Published on

ಬೀದರ್: ಜಿಲ್ಲೆಯಲ್ಲಿ ಕರೊನಾ ಮಹಾ ಸ್ಫೋಟ ಮುಂದುವರಿದೆ. ಕಳೆದೊಂದು ವಾರದಿಂದ ನಿತ್ಯ ನೂರು, ಇನ್ನೂರು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗುತ್ತಿವೆ. ಎರಡೇು ದಿನದಲ್ಲಿ 421ಮಂದಿಗೆ ಸೋಂಕು ತಗುಲಿದೆ. ಈಗಿನ ಪ್ರಕರಣ ಗಮನಿಸಿದರೆ ಮಹಾಮಾರಿಯು ಸಮುದಾಯದೊಳಗೆ ವ್ಯಾಪಿಸಿರುವ ಸ್ಪಷ್ಟ ಲಕ್ಷಣಗಳು ಕಂಡುಬಂದಿದ್ದು, ಜಿಲ್ಲೆಗೆ ಬಹುದೊಡ್ಡ ಅಪಾಯದ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 264 ಪಾಸಿಟಿವ್ ಕೇಸ್ ಪತ್ತೆಯಾದರೆ, ಸೋಮವಾರ ಮತ್ತೆ 157 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಾರ್ಚ್ 30ರಿಂದ ಈವರೆಗೆ ಜಿಲ್ಲೆಯಲ್ಲಿ 1100ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿರುವುದು ಭೀತಿ ಸೃಷ್ಟಿಸಿದೆ.

ಗಡಿ ಜಿಲ್ಲೆಯು ಕರೊನಾದ ಎರಡನೇ ಅಲೆಯ ಸುಳಿಯಲ್ಲಿ ಸಿಲುಕಿದೆ. ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಪ್ರಕರಣಗಳು ಬರುತ್ತಿವೆ. ಮಾ. 30 ರಂದು 240, 31ರಂದು 148, ಏ. 1 ರಂದು 122, 2ರಂದು 170, 3ರಂದು 152, 4ರಂದು 264 ಹಾಗೂ 5ರಂದು 157 ಕೇಸ್ ಬಂದಿರುವುದು ಜನರ ಆತಂಕ ದ್ವಿಗುಣಗೊಳಿಸಿದೆ.

ಇಲ್ಲಿನ ಬ್ರಿಮ್ಸ್ ಮೂಲಗಳ ಪ್ರಕಾರ ಸೋಮವಾರ ರಾತ್ರಿವರೆಗೆ ಕೈಗೊಂಡ 1788 ಟೆಸ್ಟ್‌ಗಳಲ್ಲಿ 157 ಮಂದಿಗೆ ಹಾಗೂ ಭಾನುವಾರ ರಾತ್ರಿವರೆಗೆ ನಡೆಸಿದ ಸುಮಾರು 3 ಸಾವಿರ ಪರೀಕ್ಷೆಯಲ್ಲಿ 264 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡನೇ ದಿನದಲ್ಲಿ ಜಿಲ್ಲೆಯಲ್ಲಿ 421 ಮಂದಿಗೆ ಸೋಂಕು ದೃಢಪಟ್ಟಿರುವುದು ಸಹಜವೇ ಮುಂದಿನ ಅಪಾಯದ ಸುಳಿವು ನೀಡಿದೆ. ಗಣನೀಯವಾಗಿ ಹೆಚ್ಚುತ್ತಿರುವ ಕೇಸ್ನಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1600ರ ಗಡಿ ದಾಟಿದೆ.

ಕಳೆದೊಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಒಂದು ವಾರದಿಂದಂತೂ ಇದರ ಪ್ರಕೋಪ ತೀವ್ರಗೊಂಡಿದೆ. ಈ ಅವಧಿಯಲ್ಲೇ 1200ಕ್ಕೂ ಹೆಚ್ಚು ಪಾಸಿಟಿವ್ ಪತ್ತೆಯಾಗಿವೆ. ನಿತ್ಯವೂ ಸರಾಸರಿ 150ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಬರುತ್ತಿರುವುದು ತಲ್ಲಣಕ್ಕೆ ಕಾರಣವಾಗಿದೆ. ಇಷ್ಟೊಂದು ಕ್ಷಿಪ್ರಗತಿಯಲ್ಲಿ ಕರೊನಾ ಪ್ರಕರಣ ಬರುತ್ತಿದ್ದರೂ ಜನ ಮಾತ್ರ ಬಿಂದಾಸ್ ಇದ್ದಾರೆ. ಬಹುತೇಕರು ಕೋವಿಡ್ ನಿಯಮ ಪಾಲನೆಯಿಂದ ದೂರವಿದ್ದಾರೆ. ಸರ್ಕಾರ, ಜಿಲ್ಲಾಡಳಿತ ಸೂಚಿಸಿದ ಮಾರ್ಗಸೂಚಿ ಬಹುತೇಕರು ಪಾಲಿಸುತ್ತಿಲ್ಲ. ಸಭೆ, ಸಮಾರಂಭ, ಸಮಾವೇಶ ಭರ್ಜರಿ ನಡೆದಿವೆ. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಜನಜಾತ್ರೆಯೇ ಸೇರುತ್ತಿವೆ. ಬಿಜೆಪಿ, ಕಾಂಗ್ರೆಸ್ ನಿಂದ ದೊಡ್ಡ ದೊಡ್ಡ ಪ್ರಚಾರ ಸಭೆ ನಡೆಯುತ್ತಿದ್ದು, ಸಹಸ್ರಾರು ಜನರು ಸೇರುತ್ತಿದ್ದಾರೆ. ಇದು ಜಿಲ್ಲೆಗೆ ಮತ್ತಷ್ಟು ಕಷ್ಟ ತರುವುದು ಸ್ಪಷ್ಟವಾಗಿದೆ.

ಕಲ್ಯಾಣ ಕದನದಲ್ಲಿ ಜನಜಾತ್ರೆ
ಕೋವಿಡ್ ನಿಯಮಕ್ಕಿಲ್ಲ ಬೆಲೆ

ಬಸವಕಲ್ಯಾಣ ಉಪ ಚುನಾವಣೆ ಅಖಾಡ ದಿನೇ ದಿನೆ ಕಾವೇರುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಿಂದ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಈವರೆಗೆ ನಾನಾ ಸಭೆ, ಸಮಾವೇಶಗಳಲ್ಲಿ ಸಹಸ್ರಾರು ಜನರು ಕರೊನಾದ ಭಯ ಮರೆತು ಸೇರುತ್ತಿದ್ದಾರೆ. ಯಾವುದೇ ಸಮಾವೇಶಗಳಿದ್ದರೂ ಕೋವಿಡ್ ನಿಯಮ ಪಾಲನೆ ಕಾಣುತ್ತಿಲ್ಲ. ಮಾಸ್ಕ್ ಧರಿಸುವವರ ಸಂಖ್ಯೆ ಶೇ.10 ರಷ್ಟು ಇಲ್ಲ. ಪರಸ್ಪರ ಅಂತರ ಕಾಪಾಡುವಿಕೆ ಮರೆಯಾಗಿದೆ. ಪ್ರಚಾರ ಸಭೆಗಳಲ್ಲಿ ದೊಡ್ಡ ಪ್ರಮಾಣದ ಜನರು ಕಾಣುತ್ತಿದ್ದಾರೆ. ಪಾರ್ಟಿ, ಪ್ರೊಟೆಸ್ಟ್ ಸೇರಿ ಜನಜಾತ್ರೆ ಸೇರುವಿಕೆಗೆ ಸರ್ಕಾರ ನಿಷೇಧ ಹೇರಿದೆ. ಆದರೆ ಉಪ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯವರು, ಪ್ರತಿಪಕ್ಷ ಕಾಂಗ್ರೆಸ್ ನವರೇ ಜನರನ್ನು ಸೇರಿಸಿ ಕೋವಿಡ್ ನಿಯಮ ಗಾಳಿಗೆ ತೂರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net