2 ಕೋಟಿ ಮೌಲ್ಯದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರ

2 ಕೋಟಿ ಮೌಲ್ಯದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರ
Published on

ಹಾಸನ : ಜಿಲ್ಲೆಯಾದ್ಯಂತ ಕಳೆದ 2 ವರ್ಷದಲ್ಲಿ ನಡೆದ ವಿವಿಧ 66 ಅಪರಾಧ ಪ್ರಕರಣಗಳಲ್ಲಿ 79 ಆರೋಪಿಗಳ ಸಮೇತ ಅವರಿಂದ ವಶಪಡಿಸಿಕೊಳ್ಳಲಾದ ಸುಮಾರು 2.08 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ಶುಕ್ರವಾರ ಜಿಲ್ಲಾ ಪೋಲಿಸ್ ಇಲಾಖೆದಿಂದ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ನಗರದ ಡಿ.ಆರ್ ಸಮುದಾಯ ಭವನದಲ್ಲಿ ನಡೆದ 2022- 23 ಎರಡು ವರ್ಷಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ನಗದು ಹಾಗೂ ಚಿನ್ನಾಭರಣ ಇತರೆ ವಸ್ತುಗಳನ್ನು ವಾರಸುದಾರರಿಗೆ ಎಸ್ಪಿ ಹರಿರಾಂ ಶಂಕರ್ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಪೈಕಿ ಹಾಸನ ಜಿಲ್ಲೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಹಾಸನ ಜಿಲ್ಲೆ ಶೇ.50ರಷ್ಟು ಯಶಸ್ವಿಯಾಗುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದರು.

ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳ ಪರಿಶ್ರಮದಿಂದ ಇದು ಸಾಧ್ಯವಾಗಿದ್ದು , ಎಲ್ಲಾ ಪೊಲೀಸರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಸುರಕ್ಷತಾ ದೃಷ್ಟಿಯಿಂದ ಪ್ರತಿ ಮನೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ, ಮನೆಯಿಂದ ಹೊರಗೆ ಹೋಗುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದು ಸಲಹೆ ನೀಡಿದರು.

ತಮ್ಮ ಮನೆಯಲ್ಲಿ ಇರುವ ಹಣ, ಒಡವೆ ಹಾಗೂ ಬೆಲೆಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್‌ಗಳಲ್ಲಿ ಭದ್ರವಾಗಿ ಇಡುವುದು ಉತ್ತಮ. ವಾರಗಟ್ಟಲೇ ಹೊರಗೆ ಹೋಗುವವರು ಬೀಟ್ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಪೊಲೀಸರು ತಮ್ಮ ಮನೆಯ ಬಳಿ ಬೀಟ್ ಹಾಕುವ ಮೂಲಕ ಭದ್ರತೆ ಒದಗಿಸುವ ಕೆಲಸ ಮಾಡಲಿದ್ದಾರೆ. ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಬಿ.ಕೆ ರವಿಕಾಂತ್ ಮಾತನಾಡಿ, ಅಪರಾಧ ಪ್ರಕರಣಗಳಲ್ಲಿ ಮುನ್ನೆಚ್ಚರಿಕೆ ವಹಿಸುವುದು ಬಹಳ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ, ಘರ್ಷಣೆಗಳು ನಡೆದು ಚಿಕ್ಕ ವಯಸ್ಸಿಗೇ ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳು ಕಂಡು ಬರುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಲೋಕ ಅದಾಲತ್ ಮೂಲಕ ಅನೇಕ ಪ್ರಕರಣಗಳನ್ನು ಇತ್ಯರ್ಥ ಮಾಡುವ ಕೆಲಸವನ್ನು ಜಿಲ್ಲಾ ನ್ಯಾಯಾಲಯದ ಮೂಲಕ ಮಾಡಲಾಗುತ್ತಿದ್ದು, ಜಿಲ್ಲೆಯ 42ನ್ಯಾಯಾಲಯ ಇದ್ದು ಇನ್ನೂ 78 ಸಾವಿರ ಪ್ರಕರಣಗಳನ್ನು ಇತ್ಯರ್ಥವಾಗಬೇಕು. ಜೂನ್24ರಂದು ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಸಕಲೇಶಪುರ ವಿಭಾಗದ ಅಪರ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್, ಹಾಸನ ಉಪವಿಭಾಗದ ಡಿ.ವೈ.ಎಸ್.ಪಿ ಉದಯ್ ಭಾಸ್ಕರ್, ಅರಸೀಕೆರೆ ಉಪವಿಭಾಗದ ಲೋಕೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net