

ಬೆಂಗಳೂರು: ಆ ಕೋಣೆಯ ತುಂಬೆಲ್ಲ ನೋಟುಗಳೇ. ಕೈನಲ್ಲಿ ಬಾಚಿಕೊಂಡರೂ ಮುಗಿಯದಷ್ಟು ಕಂತೆ ಕಂತೆ. ಎಣಿಸುವುದಕ್ಕೆ ಸಮಯವಿಲ್ಲ. ಹೀಗಾಗಿ ನೋಟಿನ ಗುಡ್ಡೆ ಮಾಡಿ ಸರಿಸಮನಾದ ಹಂಚಿಕೆ!
ಇದು ಕುಮಾರಸ್ವಾಮಿ ಲೇಔಟ್ ಪೊಲೀಸರ ಬಲೆಗೆ ಬಿದ್ದ ಇಬ್ಬರು ಐನಾತಿ ಕಳ್ಳರ ಖತರ್ನಾಕ್ ಕ್ರೖೆಂ ಸ್ಟೋರಿ. ಇವರಿಗೆ ಇವರಿಗೆ ತಾವು ಕದ್ದ ಹಣವೆಷ್ಟು ಎಂಬುದರ ಅಂದಾಜಿರಲಿಲ್ಲ. ನಂತರದಲ್ಲಿ ಪೊಲೀಸರು ಕಳ್ಳರನ್ನು ಬಂಧಿಸಿದ ಮೇಲೇ ಅದು ಬರೋಬ್ಬರಿ 2 ಕೋಟಿ ರೂಪಾಯಿಯಷ್ಟಿತ್ತು ಎಂಬುದು ಗೊತ್ತಾಗಿದ್ದು.
ಸುಬ್ರಹ್ಮಣ್ಯಪುರದ ವಸಂತಪುರ ಪೈಪ್ಲೈನ್ ರಸ್ತೆಯ ಸುನೀಲ್ಕುಮಾರ್ ಅಲಿಯಾಸ್ ತೊರೆ (35) ಮತ್ತು ಮಾಗಡಿ ರಸ್ತೆಯ ಕೆಬ್ಬೆಹಳ್ಳಿಯ ದಿಲೀಪ್ (23) ಬಂಧಿತರು. ಆರೋಪಿಗಳಿಂದ 1.76 ಕೋಟಿ ರೂ. ನಗದು, 12 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆಟೋ ಚಾಲಕರಾಗಿದ್ದ ಸುನೀಲ್ ಮತ್ತು ದಿಲೀಪ್ಗೆ ಹಿಂದಿನಿಂದಲೂ ಮನೆಗಳ್ಳತನವೇ ಕಸುಬು. ಸುನೀಲ್ ವಿರುದ್ಧ 7 ಮನೆಗಳವು ಪ್ರಕರಣ ದಾಖಲಾಗಿವೆ. ದಿಲೀಪ್ ಮಾಗಡಿಯಲ್ಲಿ ಡ್ರಗ್ಸ್ ಕೇಸ್ನಲ್ಲಿ ಜೈಲುಪಾಲಾಗಿದ್ದ. ಜೈಲಿನಲ್ಲಿ ಸ್ನೇಹಿತರಾದ ಇವರು 5 ತಿಂಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದರು. ಜಾಮೀನು ಪಡೆಯುವಾಗ ವಕೀಲರಿಗೆ ಶುಲ್ಕ ನೀಡಲು ಸ್ನೇಹಿತನ ಬಳಿ 2 ಲಕ್ಷ ರೂ. ಸಾಲ ಮಾಡಿದ್ದರು. ಹೊರಬಂದ ಮೇಲೆ ಸಾಲ ತೀರಿಸಲು ಮತ್ತೆ ಕಳ್ಳತನಕ್ಕೆ ಇಳಿದಿದ್ದರು.
ಆಟೋದಲ್ಲಿ ಎಲ್ಲೆಡೆ ಸುತ್ತಾಡಿ ಬೀಗ ಹಾಕಿರುವ ಮನೆಗಳ ಮೇಲೆ ನಿಗಾ ವಹಿಸುತ್ತಿದ್ದರು. ಕುಮಾರಸ್ವಾಮಿ ಲೇಔಟ್ನ ಸಾಗರ್ ಆಸ್ಪತ್ರೆ ಹಿಂಭಾಗ ನೆಲೆಸಿದ್ದ ಮಧ್ಯಪ್ರದೇಶ ಮೂಲದ ಉದ್ಯಮಿ ಸಂದೀಪ್ ಲಾಲ್ ತನ್ನ ಮನೆಗೆ ಬೀಗ ಹಾಕಿ ಪಕ್ಕದ ರಸ್ತೆಯಲ್ಲಿ ನೆಲೆಸಿದ್ದ ತಂದೆ ಮನೆಗೆ ಹೋಗಿದ್ದರು. ಈ ಮನೆಯನ್ನು ಗಮನಿಸಿದ ಕಳ್ಳರು ಮಾ.28ರ ರಾತ್ರಿ ಆಟೋದಲ್ಲಿ ಬಂದು ಮನೆ ಬೀಗ ಒಡೆದು ಒಳನುಗ್ಗಿ ಎಲ್ಲೆಡೆ ಜಾಲಾಡಿದಾಗ, ಬೀರುವಿನಲ್ಲಿ ಭಾರಿ ನಗದು ಕಂಡುಬಂದು ಅಷ್ಟೂ ಹಣವನ್ನು ಚೀಲಕ್ಕೆ ತುಂಬಿಕೊಂಡು ಆಟೋದಲ್ಲಿ ಸಾಗಿಸಿದ್ದರು.
ಕುಡಿದು ಕುಣಿದು ಕುಪ್ಪಳಿಸಿದರು: ಸಂದೀಪ್ ಲಾಲ್ ರೈಲ್ವೆ ಸುರಕ್ಷತಾ ದಳ (ಆರ್ಪಿಎಫ್) ನಿವೃತ್ತ ಅಧಿಕಾರಿಯ ಪುತ್ರ. ಇವರ ಕುಟುಂಬ ಚೆನ್ನೈನಲ್ಲಿ ನೆಲೆಸಿದೆ. ಕೆ.ಎಸ್. ಲೇಔಟ್ನಲ್ಲಿ ಇವರಿಗೆ ಸೇರಿದ ಎರಡು ಮನೆಗಳಿವೆ. ಬೆಂಗಳೂರಿಗೆ ಬಂದಾಗ ಇಲ್ಲಿ ಉಳಿದುಕೊಳ್ಳುತ್ತಿದ್ದರು. ಆರೋಪಿಗಳು ಮನೆ ಮೇಲೆ ನಿಗಾ ವಹಿಸಿ ಒಳನುಗ್ಗಿದ್ದರು. ಮನೆ ಎಲ್ಲೆಡೆ ಹುಡುಕಾಟ ನಡೆಸಿದರೂ ಏನೂ ಸಿಕ್ಕಿರಲಿಲ್ಲ. ಕೊನೆಗೆ ಸಜ್ಜಾದ ಮೇಲೆ ಎರಡು ಮೂಟೆಗಳು ಕಣ್ಣಿಗೆ ಬಿದ್ದು, ತೆರೆದು ನೋಡಿದಾಗ ಹಣದ ಕಂತೆಗಳಿದ್ದವು. ಖುಷಿ ತಾಳಲಾರದೆ ಅಲ್ಲೇ ಮದ್ಯ ಸೇವಿಸಿ ಕುಣಿದು ಕುಪ್ಪಳಿಸಿದ್ದರು.