ದಸರಾಕ್ಕೆ 2ಹಂತದ ಖಾಕಿ ಭದ್ರತೆ

mysore
Published on

ಮೈಸೂರು: ಸುರಕ್ಷಿತ, ಸುಗಮ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗಾಗಿ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದ್ದು, 2 ಹಂತದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿದೆ.


ದಸರಾ ಅ.3 ರಿಂದ 12ರವರೆಗೆ ನಡೆಯಲಿದ್ದು, ನಗರದ ವಿವಿಧ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ, ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಎರಡು ಹಂತದಲ್ಲಿ ಸುರಕ್ಷತಾ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ನಗರದ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಅಧಿಕಾರಿ ಮತ್ತು ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. 7,995 ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ.

1ನೇ ಹಂತದಲ್ಲಿ 16 ಎಸ್‌ಪಿ, 599 ಪೊಲೀಸ್ ಅಧಿಕಾರಿಗಳು, 2381 ಸಿಬ್ಬಂದಿ ಸೇರಿದಂತೆ 2,996, ಜಂಬು ಸವಾರಿ ಮೆರವಣಿಗೆ ಸಂದರ್ಭದಲ್ಲಿನ 2ನೇ ಹಂತದಲ್ಲಿ 2 ಡಿಐಜಿ, 27 ಎಸ್ಪಿ, 989 ಪೊಲೀಸ್ ಅಧಿಕಾರಿಗಳು, 3,981 ಸಿಬ್ಬಂದಿ ಸೇರಿದಂತೆ 4,999 ಸಿಬ್ಬಂದಿಯನ್ನು ಅರಮನೆ, ಬನ್ನಿಮಂಟಪದ ಕವಾಯತು ಮೈದಾನ ಸೇರಿದಂತೆ ಇನ್ನಿತರ ಕಡೆ ನಿಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಸಶಸ್ತ್ರ ಪಡೆಗಳು, ವಿದ್ವಂಸಕ ಕೃತ್ಯ ಪತ್ತೆ ದಳಗಳು, ಬಾಂಬ್ ನಿಷ್ಕ್ರಿಯ ದಳ, ವಿಶೇಷ ಗರುಡಾ ಪಡೆ ಸನ್ನದ್ಧವಾಗಿರಲಿದೆ. ಜತೆಗೆ, 10 ಸಿಎಆರ್, 33 ಕೆಎಸ್‌ಆರ್‌ಪಿ 33, 29 ಎಎಸ್‌ಸಿ, 3 ಬಿಡಿಡಿಎಸ್, 1 ಗರುಡಾ ಪಡೆ, - ಐಎಸ್‌ಡಿ- ಸಿಐಇಡಿ ತುಕಡಿಗಳು ಮತ್ತು ತಂಡಗಳು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು.


ಮೊಬೈಲ್ ಕಮಾಂಡ್ ಸೆಂಟರ್ ಕಾರ್ಯ ನಿರ್ವಹಣೆ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾಗಳ ಬಳಕೆ, ಟ್ರಾಫಿಕ್ ಕಂಟ್ರೋಲ್‌ಗಾಗಿ ಮೆಗಾ ಫೋನ್ ಬಳಕೆ, ಅಪರಾಧ ತಡೆಗಟ್ಟಲು ಹೊರಜಿಲ್ಲೆ ಮತ್ತು ಹೊರರಾಜ್ಯದ ವಿಶೇಷ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ತಂಡದ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. 1,500 ಗೃಹರಕ್ಷಕ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ನಗರದ ವಸತಿಗೃಹಗಳ ಮೇಲೆ ಅನಿರೀಕ್ಷಿತ ತಪಾಸಣೆ ಮಾಡಿ ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆ ಮಾಡಲಾಗುತ್ತದೆ. ರೈಲು, ಬಸ್ ನಿಲ್ದಾಣಗಳಲ್ಲಿ ದಿನದ 24 ಗಂಟೆಯೂ ಅಪರಾಧ ವಿಭಾಗದ ಸಿಬ್ಬಂದಿ ನಿಯೋಜಿಸಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ 24*7 ಗಸ್ತು ವಾಹನಗಳ ಸನ್ನದ್ಧವಾಗಿರುತ್ತವೆ ಎಂದು ತಿಳಿಸಿದರು

ಸಿಸಿ ಕ್ಯಾಮೆರಾವೂ ಬಳಕೆ:


ಪೊಲೀಸ್ ಇಲಾಖೆಯ ಹಾಲಿ 380 ಸಿಸಿ ಕ್ಯಾಮೆರಾದೊಂದಿಗೆ ದಸರಾಗಾಗಿ ಹೆಚ್ಚುವರಿಯಾಗಿ ಪ್ರಮುಖ ಸ್ಥಳಗಳಲ್ಲಿ 150 ಸಿಸಿ ಕ್ಯಾಮೆರಾ ಅಳವಡಿಕೆ ಮಾಡುತ್ತಿದ್ದು, ಜತೆಗೆ, ಕರ್ನಾಟಕ ಸಾರ್ವಜನಿಕರ ಭದ್ರತೆ ಕಾಯ್ದೆ-2017ರ ಪ್ರಕಾರ ನಗರ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಅಳವಡಿಸಿರುವ 13,140 ಸಿಸಿ ಕ್ಯಾಮೆರಾಗಳನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಸೀಮಾ ಲಾಟ್ಕರ್ ಮಾಹಿತಿ ನೀಡಿದರು.

ರೌಡಿ, ಗೂಂಡಾಗಳ ವಿರುದ್ಧ ಕ್ರಮ:

ನಗರಕ್ಕೆ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳ ಸ್ಥಾಪಿಸಿ ವಾಹನಗಳ ಪರಿಶೀಲನೆ ನಡೆಸಿ ನಿಗಾ ವಹಿಸಲಾಗುತ್ತದೆ. ಚಟುವಟಿಕೆಯುಳ್ಳ ರೌಡಿಗಳು, ಗೂಂಡಾಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.


ಅರಸು ರಸ್ತೆ, ಅರಮನೆ ಬಳಿ ವಾಹನ ನಿಷೇಧ


ಅ.3ರಿಂದ 12ರ ವರೆಗೆ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಡಿ.ದೇವರಾಜ ಅರಸು ರಸ್ತೆ, ಪುರಂದರ ರಸ್ತೆ, ಗನ್‌ಹೌಸ್ ವೃತ್ತದಿಂದ ಹಾರ್ಡಿಂಗ್ ವೃತ್ತದ ವರೆಗೆ ಬಿಎನ್ ರಸ್ತೆಯಲ್ಲಿ ವಾಹನಗಳ ಮತ್ತು ವಾಹನಗಳ ನಿಲುಗಡೆಯನ್ನೂ ನಿಷೇಧಿಸಲಾಗಿದೆ.

ಅರಮನೆ ಸುತ್ತಮುತ್ತ ರಸ್ತೆಗಳು, ಇತರ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಸದರಿ ರಸ್ತೆಗಳ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ. ಕೆಎಸ್‌ಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ಗಳು, ನಗರ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಜನರ ಅನುಕೂಲಕ್ಕಾಗಿ ದಸರಾ ವಿವಿಧ ಕಾರ್ಯಕ್ರಮಗಳ ಸ್ಥಳದ ಬಳಿಯೇ ಸಾಧ್ಯವಾದಷ್ಟು ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

  • ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ ಚಾಮುಂಡಿ ಪಡೆ ಕಾರ್ಯನಿರ್ವಹಣೆ
  • 20 ಅಗ್ನಿ ಶಾಮಕ ದಳ, 20 ಅಂಬುಲೆನ್ಸ್‌ಗಳ ನಿಯೋಜನೆ
  • ಸಾರ್ವಜನಿಕರಿಗೆ ಸುರಕ್ಷತೆ ಮತ್ತು ಮಾಹಿತಿಗಾಗಿ ಕಿರು ಹೊತ್ತಿಗೆಗಳ ವಿತರಣೆ
  • ಪ್ರವಾಸಿಗರಿಗೆ ಸೂಚನೆ, ಸಹಾಯಕ್ಕಾಗಿ ಸಹಾಯ ಕೇಂದ್ರ ಸ್ಥಾಪನೆ
  • ದಸರಾ ಕಾರ್ಯಕ್ರಮಗಳಲ್ಲಿ ಎಎಸ್‌ಸಿ ತಂಡದಿಂದ ಪರಿಶೀಲನೆ

* ಗುಡ್ ಮಾರ್ನಿಂಗ್ ಬೀಟ್‌ಗಳ ನಿರ್ವಹಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net