2 ದೇಗುಲದ ಹುಂಡಿ ಹಣ ಕಳವು

FotoJet (1)
Published on

ಲಕ್ಷಾಂತರ ರೂ. ದೋಚಿರುವ ಕಳ್ಳರು ಪಟ್ಟಣ ಠಾಣೆಯಲ್ಲಿ ದೂರು ದಾಖಲು

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯಲ್ಲಿರುವ ಶ್ರೀ ಬೈಲಾಂಜನೇಯಸ್ವಾಮಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಹುಂಡಿ ಒಡೆದು ಲಕ್ಷಾಂತರ ಹಣ ದೋಚಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಶುಕ್ರವಾರ ಬೆಳಗಿನ ಜಾವ ದೇವಸ್ಥಾನದ ಆವರಣ ಸ್ವಚ್ಛಗೊಳಿಸುವ ಮಹಿಳೆ ಆವರಣದ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದನ್ನು ಗಮನಿಸಿ ದೇವಸ್ಥಾನದ ಅರ್ಚಕರಿಗೆ ತಿಳಿಸಿದ್ದಾಳೆ. ಅರ್ಚಕರಿಂದ ವಿಷಯ ತಿಳಿಸ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಹಿಂಭಾಗದ ಮಳಿಗೆಗಳ ಮೇಲ್ಛಾವಣಿ ಮುಖಾಂತರ ದೇವಸ್ಥಾನ ಪ್ರವೇಶಿಸಿರುವ ಕಳ್ಳರು, ದೇವಸ್ಥಾನಕ್ಕೆ ಅಳವಡಿಸಿದ್ದ ಎರಡು ಕಬ್ಬಿಣದ ಗ್ರಿಲ್‌ಗಳನ್ನು ಮುರಿದಿದ್ದಾರೆ. ಗರ್ಭಗುಡಿಯ ಬಾಗಿಲು ಮುರಿದು ಒಳಗಡೆ ಇದ್ದ ಹುಂಡಿ ಒಡೆದು ಸುಮಾರು ಹಣ ದೋಚಿದ್ದಾರೆ. ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಕಳೆದ 14 ತಿಂಗಳಿಂದ ಹುಂಡಿ ತೆರೆದಿರಲಿಲ್ಲ ಎನ್ನಲಾಗಿದ್ದು, ಪ್ರತಿವರ್ಷ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಣ ಹುಂಡಿಯಲ್ಲಿ ಸಂಗ್ರಹವಾಗುತ್ತಿತ್ತು ಎನ್ನಲಾಗಿದೆ.

ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಅಪರಾಧ ವಿಭಾಗದ ಆರಕ್ಷಕ ಉಪ ನಿರೀಕ್ಷಕ ಮುನಿರತ್ನಂ, ಮತ್ತು ಸಿಬ್ಬಂದಿ, ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳ ಪರಿಶೀಲಿಸಿದ್ದು, ಪಟ್ಟಣ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ

ಶ್ರೀ ಬೈಲಾಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಹುಂಡಿಯನ್ನು ಸಹ ಒಡೆದು ಹಣ ದೋಚಲಾಗಿದೆ. ಕಳೆದ ಜ.15ರಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಅಂದಿನಿಂದ ಸಂಗ್ರಹವಾಗಿರುವ 10-15 ಸಾವಿರ ರೂ.ಕಳುವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸಿಸಿ ಕ್ಯಾಮರಾ ಅಳವಡಿಕೆಗೆ ಆಗ್ರಹ

ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಬೈಲಾಂಜನೇಯಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು, ಕೂಡಲೇ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಸಿಸಿ ಕ್ಯಾಮರಾ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net