ಗ್ರಾಮಾಂತರ ಜಿಲ್ಲೆಗೆ 2 ರಾಜ್ಯಮಟ್ಟದ ಪ್ರಶಸ್ತಿ

school
doddaballapura school
Published on

ನೆಲಮಂಗಲ ಹಾಗೂ ದೊಡ್ಡಬಳ್ಳಾಪುರದ ಶಿಕ್ಷಕರಿಗೆ ಸಂದ ಗೌರವ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ೋಷಣೆಯಾಗಿದ್ದು ಇದರಲ್ಲಿ ಗ್ರಾಮಾಂತರ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಒಟ್ಟು 31 ಶಿಕ್ಷಕರಿಗೆ ಪ್ರಶಸ್ತಿ ಒಲಿದಿದೆ. ಇದರಲ್ಲಿ ಇಬ್ಬರು ಶಿಕ್ಷಕರು ಗ್ರಾಮಾಂತರ ಜಿಲ್ಲೆಯವರು ಎಂಬುದು ವಿಶೇಷ. ಸೆ.5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುತ್ತದೆ. ಪ್ರಶಸ್ತಿಗೆ ಭಾಜನವಾಗಿರುವ ನೆಲಮಂಗಲದ ಶಿಕ್ಷಕ ಹಾಗೂ ದೊಡ್ಡಬಳ್ಳಾಪುರದ ಶಿಕ್ಷಕಿಯೊಬ್ಬರು ‘ವಿಜಯವಾಣಿ’ಯೊಂದಿಗೆ ಮಾತನಾಡಿದ್ದಾರೆ.
ಉತ್ತಮ ಒಡನಾಟ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು:
ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ ಜತೆಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ಎಸ್‌ಡಿಎಂಸಿ ಸದಸ್ಯರು, ಸಹದ್ಯೋಗಿಗಳು, ಶಾಲಾ ಮಕ್ಕಳು, ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ. ಸರ್ಕಾರದ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿರುವುದಕ್ಕೆ ಇವರೆಲ್ಲರ ಪ್ರೋತ್ಸಾಹವೇ ಕಾರಣ ಎಂಬುದು ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ ಎಂ.ಎಚ್.ಮಂಗಳಕುಮಾರಿ ಅವರ ಮಾತಾಗಿದೆ. ಸರ್ಕಾರ ಇವರನ್ನು ಗುರುತಿಸಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ಸಿಎಸ್‌ಆರ್ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಸುಸಜ್ಜಿತ ಕೊಠಡಿ, ಊಟದ ಹಾಲ್, 24 ಗಂಟೆ ಸೋಲಾರ್ ನೀರು, ಶೌಚಗೃಹ, ಕಂಪ್ಯೂಟರ್ ಕೊಠಡಿ, ಮಳೆಕೊಯ್ಲು, ಸಭಾಂಗಣ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೇರಿ ಸುಮಾರು 2 ಎಕರೆ ವಿಸ್ತೀರ್ಣದಲ್ಲಿನ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ವೃತ್ತಿಯಲ್ಲಿ 32 ವರ್ಷ ಸರ್ವಿಸ್ ಆಗಿದೆ. ಈ ಶಾಲೆಯಲ್ಲಿ 8 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಗ್ರಾಮಸ್ಥರು, ಶಾಲೆಯ ಮಕ್ಕಳು ಹಾಗೂ ಸಹದ್ಯೋಗಿಗಳೊಂದಿಗೆ ಉತ್ತಮ ಒಡನಾಟದಿಂದ ಸಂತೃಪ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪ್ರಶಸ್ತಿ ದೊರಕಿರುವುದಕ್ಕೆ ನನ್ನ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕೆಂಬ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎನ್ನುತ್ತಾರೆ ಮುಖ್ಯಶಿಕ್ಷಕಿ ಎಂ.ಎಚ್.ಮಂಗಳಕುಮಾರಿ.
ಎಲ್ಲ ಹೆಣ್ಣು ಮಕ್ಕಳೂ ಶಿಕ್ಷಕರೇ?

ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಷ್ಟೇನು ಅರಿವಿಲ್ಲದ ಆಗಿನ ಕಾಲದಲ್ಲೆ ಮಂಗಳಕುಮಾರಿ ಅವರ ತಂದೆತಾಯಿ ಇವರೂ ಸೇರಿ ಎಲ್ಲ ಆರು ಹೆಣ್ಣು ಮಕ್ಕಳಿಗೂ ಶಿಕ್ಷಣ ಶಿಕ್ಷಣ ಕೊಡಿಸಿದ್ದರು. ಅದೇ ರೀತಿ ಓದಿದ ಈ ಸಹೋದರಿಯರೆಲ್ಲರೂ ಶಿಕ್ಷಕ ವೃತ್ತಿಯನ್ನೆ ಆಯ್ಕೆಮಾಡಿರುವುದು ವಿಶೇಷ.

ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂಬ ಛಲ:
ನೆಲಮಂಗಲ ತಾಲೂಕು, ಅರೇಬೊಮ್ಮನಹಳ್ಳಿಯ ಎಸ್‌ಎಲ್‌ಎನ್ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಟಿ.ಕೆ. ರವಿಕುಮಾರ್ ಅವರಿಗೆ ಪ್ರಶಸ್ತಿ ಒಲಿದಿದೆ. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸುವುದರ ಮೂಲಕ ಅವರ ಭವಿಷ್ಯವನ್ನು ರೂಪಿಸುವುದರ ಜತೆಗೆ ದಾಖಲಾತಿ ಆಂದೋಲನ, ಪರಿಸರ ಆಂದೋಲನ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ರಾತ್ರಿ ಪಾಠಶಾಲೆ, ಉಚಿತ ಶಿಕ್ಷಣ, ವಸತಿ ಮತ್ತು ವಾಹನ ಸೌಲಭ್ಯ, ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ಹಾಗೂ ಇನ್ನಿತರ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತು ಸಮವಸ್ತ್ರ ಹಾಗೂ ಇನ್ನಿತರೇ ಶೈಕ್ಷಣಿಕ ಪರಿಕರಗಳನ್ನು ದಾನಿಗಳ ಮೂಲಕ ನಿರಂತರವಾಗಿ ನೀಡುವುದರ ಮೂಲಕ ಮಕ್ಕಳ ಶೈಕ್ಷಣಿಕ ಸಾಧನೆಯ ಯಶಸ್ವಿಗೆ ಶ್ರಮಿಸಿದ್ದಾರೆ. ಹಾಗೂ ಹಿರಿಯ ವಿದ್ಯಾರ್ಥಿ ಮತ್ತು ಹಿತೈಷಿಗಳ ಸಂಘ ಸ್ಥಾಪಿಸಿ ವಿನೂತನ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ನಿರಂತರವಾಗಿ 2005-06 ನೇ ಸಾಲಿನಿಂದ 2022-23 ರವಗೆ ಶೇ.100 ಫಲಿತಾಂಶ ದಾಖಲಿಸುವಲ್ಲಿ ಇವರ ಶ್ರಮ ದೊಡ್ಡದಿದೆ. ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ರವಿಕುಮಾರ್ ಅವರನ್ನು ಆಯ್ಕೆ ಮಾಡಿದೆ. ಗ್ರಾಮೀಣ ಭಾಗದ ಮಕ್ಕಳು ಯಾವುದೇ ನಗರ ಪ್ರದೇಶದಲ್ಲಿನ ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದಂತೆ ಶಿಕ್ಷಣ ಪಡೆಯಬೇಕು ಇದರ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿರಬೇಕು ಎಂಬ ಸದುದ್ದೇಶದಿಂದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎನ್ನುತ್ತಾರೆ ರವಿಕುಮಾರ್. ಸರ್ಕಾರ ನನ್ನ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಸಂತಸವಾಗಿದೆ ಇದರಿಂದ ನನಗೆ ಮತ್ತಷ್ಟು ಸ್ಪೂರ್ತಿ ಸಿಕ್ಕಂತಾಗಿದೆ. ಇಂಥ ಸೇವೆಗೆ ಅವಕಾಶ ಮಾಡಿಕೊಟ್ಟ ಸಹದ್ಯೋಗಿಗಳು, ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳು ಗ್ರಾಮಸ್ಥರು ಸೇರಿ ಎಲ್ಲರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರಕ್ಕೆ ಅಭಾರಿಯಾಗಿದ್ದೇನೆ ಎನ್ನುತ್ತಾರೆ ಪ್ರಶಸ್ತಿ ವಿಜೇತ ಶಿಕ್ಷಕ ರವಿಕುಮಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net