ಕಡೂರು ತಾಲೂಕಿನಲ್ಲಿ ವೋಟಿಂಗ್ ಶೇ.2 ಹೆಚ್ಚಳ

KDR mla
ಕಡೂರಿನಲ್ಲಿರುವ ನಿವಾಸದಲ್ಲಿ ಶಾಸಕ ಕೆ.ಎಸ್.ಆನಂದ್ ವಿಜಯವಾಣಿ ಪತ್ರಿಕೆ ಓದಿದರು. ಪುರಸಭೆ ಸದಸ್ಯ ಈರಳ್ಳಿ ರಮೇಶ್ ಇದ್ದರು.
Published on

ಡೂರು: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿದ್ದು ಫಲಿತಾಂಶಕ್ಕಾಗಿ ಒಂದು ತಿಂಗಳು ಕಾಯಬೇಕಿದೆ. ತಾಲೂಕಿನಲ್ಲಿ ಈ ಬಾರಿ ಬಿರು ಬಿಸಿಲಿನಲ್ಲೂ ಜನರು ಉತ್ಸಾಹದಿಂದ ಆಗಮಿಸಿ ಮತದಾನ ಮಾಡಿದ್ದು ವಿಶೇಷ. ಶೇ.74.73 ಮತದಾನವಾಗಿದ್ದು ಕಳೆದ ಬಾರಿಗಿಂತ ಶೇ.2 ಹೆಚ್ಚಳವಾಗಿದೆ. 2019ರ ಚುನಾವಣೆಯಲ್ಲಿ ಶೇ.72 ಮತದಾನವಾಗಿತ್ತು.

253 ಮತಗಟ್ಟೆಗಳಲ್ಲಿ 208553 ಲಕ್ಷ ಮತದಾರರ ಪೈಕಿ ಪುರುಷ 78197, ಮಹಿಳೆ 77426, ತೃತೀಯ ಲಿಂಗಿಗಳು 3 ಸೇರಿದಂತೆ 155626 ಮತಗಳು ಚಲಾವಣೆಗೊಂಡಿವೆ.
ಸಿದ್ದರಾಮನಹಳ್ಳಿ 253 ಮತಗಟ್ಟೆ ಕೇಂದ್ರದಲ್ಲಿ ಶೇ.87.92 ಮತದಾನ, ಹರುವನಹಳ್ಳಿಯ 155ರ ಮತಗಟ್ಟೆಯಲ್ಲಿ ಶೇ.87.31 ಹಾಗೂ 203ರ ಶಿವಪುರ ಮತಗಟ್ಟೆಯಲ್ಲಿ ಶೇ.87.04 ಅತಿ ಹೆಚ್ಚು ಮತದಾನವಾಗಿರುವ ಮತಗಟ್ಟೆಗಳಾಗಿವೆ. ಕಡೂರು ವೆಂಕಟೇಶ್ವರ ನಗರದ 107ರ ಮತಗಟ್ಟೆಯಲ್ಲಿ ಶೇ.49.37 ಮತ ಚಲಾವಣೆಗೊಳ್ಳುವ ಮೂಲಕ ಕಡಿಮೆ ಮತದಾನವಾಗಿರುವ ಮತಗಟ್ಟೆಯಾಗಿದೆ. ಆದರೆ ಈ ಭಾಗದ ಮತಗಟ್ಟೆ ಕೇಂದ್ರದ ವ್ಯಾಪ್ತಿಯ ಮತದಾರರು ಬಹುತೇಕ ಸರ್ಕಾರಿ ನೌಕರರಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿದ್ದರ ಪರಿಣಾಮ ಮತದಾನ ಪ್ರಮಾಣ ಕಡಿಮೆಯಾಗಿದೆ.
ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕ್ಷೇತ್ರದ ಪ್ರಮುಖ ಮೂರೂ ಪಕ್ಷಗಳ ನಾಯಕರು ಸತತ ಒಂದು ತಿಂಗಳು ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಶುಕ್ರವಾರ ಮತದಾನ ನಡೆದಿದ್ದರಿಂದ ಶನಿವಾರ ರಿಲ್ಯಾಕ್ಸ್ ಮೂಡ್‌ಗೆ ಜಾರಿದರು. ಶಾಸಕ ಕೆ.ಎಸ್.ಆನಂದ್ ಅವರು ಮನೆಗೆ ಬಂದಿದ್ದ ಜನರನ್ನು ಮಾತನಾಡಿಸುತ್ತ, ದಿನಪತ್ರಿಕೆಗಳ ವರದಿ ಗಮನಿಸುತ್ತ ಗ್ರಾಮೀಣ ಭಾಗದ ಮತದಾನದ ಪ್ರಮಾಣದ ಲೆಕ್ಕಾಚಾರ ಹಾಕಿದರು. ನಂತರ ಕಾರ್ಯಕರ್ತರೊಡನೆ ಹಾಗೂ ಕಾಂಗ್ರೆಸ್ ಕಚೇರಿಯಲ್ಲಿ ದಿನ ಕಳೆದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಶನಿವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಬಳಿಕ ಕಾರ್ಯಕರ್ತರ ಮದುವೆ ಸಮಾರಂಭದಲ್ಲಿ ಭಾಗಿಯಾದ ಬಳಿಕ ಶಿವಮೊಗ್ಗಕ್ಕೆ ತೆರಳಿದರು. ಮಾಜಿ ಶಾಸಕ ವೈಎಸ್‌ವಿ ದತ್ತ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಶಿವಮೊಗ್ಗಕ್ಕೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net