

ಮಡಿಕೇರಿ:
ಬೆಂಗಳೂರಿನ ಭಾರತೀಯ ಕೃಷಿ ಅನುಸಂಧಾನ, ಭಾರತೀಯ ತೋಟಗಾರಿಕಾ ಸಂಸ್ಥೆ ಮತ್ತೆ ಎರಡು ಹೊಸ ಹಲಸಿನ ತಳಿಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಿದೆ. ತಮಿಳುನಾಡಿನ ಪನ್ರುತಿ ತಾಲೂಕಿನ ಪಿ. ಹರಿದಾಸ್ ಅವರ ತೋಟದಲ್ಲಿ ಒಂದು ತಳಿ ಗುರುತಿಸಿದ್ದರೆ, ಮತ್ತೊಂದು ತಳಿಯನ್ನು ತಮಿಳುನಾಡಿನ ಕುಡಲೂರು ಕೀಲಮಮ್‌ಪಟ್ಟುವಿನ ವಿ. ತಿರುಮಲೈ ಅವರ ತೋಟದಲ್ಲಿ ಐಸಿಎಆರ್-ಐಐಹೆಚ್‌ಆರ್ ವಿಜ್ಞಾನಿಗಳ ತಂಡ ಗುರುತಿಸಿದೆ.
ಎರಡು ಕೂಡ ವಿಭಿನ್ನ ತಳಿಯ ಹಲಸಿನ ಹಣ್ಣಾಗಿದೆ. ಪಿ. ಹರಿದಾಸ್ ಅವರ ತೋಟದಲ್ಲಿ ಗುರುತಿಸಿರುವ ಹಲಸಿನ ಹಣ್ಣಿಗೆ ಹರಿಗೋಲ್ಡ್ (ಜೆಕೆ 2/24) ಎಂದು ನಾಮಕರಣ ಮಾಡಲಾಗಿದೆ. ಈ ಹಣ್ಣು ಹೊನ್ನಿನ ಹಳದಿ ಬಣ್ಣದ ತಾಜಾ ತೋಳೆಗಳನ್ನು ಒಳಗೊಂಡಿದ್ದು ಹೆಚ್ಚಿನ ಪೋಷಕಾಂಶ ಹೊಂದಿದೆ. ಈ ಹಣ್ಣು ನೇರವಾಗಿ ತಿನ್ನುವುದಕ್ಕೆ ಮತ್ತು ಸಂಸ್ಕರಣೆಗೆ ಯೋಗ್ಯವಾಗಿದೆ. ಪಿ. ಹರಿದಾಸ್ ಅವರ ತೋಟದಲ್ಲಿದ್ದ 45 ವರ್ಷ ಹಳೆಯ ಮರದಿಂದ ಈ ಹಣ್ಣು ಗುರುತಿಸಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಮರ ವಿಶಾಲವಾಗಿ ಹರಡಿದಂತೆ ಬೆಳೆಯುತ್ತದೆ. ಹಣ್ಣುಗಳು 8-15 ಕೆಜಿ ತೂಗುತ್ತದೆ. ಒಂದೊAದು ಹಣ್ಣಿನಲ್ಲೂ 80-90 ತೋಳೆಗಳು ಇರುತ್ತದೆ. ಒಂದು ಮರದಲ್ಲಿ 50-55 ಹಣ್ಣುಗಳು ಬಿಡುತ್ತದೆ. ಸುವಾಸನೆಯಿಂದ ಕೂಡಿರುವ ಹಣ್ಣಿನಲ್ಲಿ ಅಂಟು ಕಡಿಮೆ ಇರುತ್ತದೆ. ಮರದಲ್ಲಿ ಸರಾಸರಿ 300-350 ಕೆಜಿ ಹಣ್ಣುಗಳು ಬಿಡುತ್ತದೆ.
ವಿ. ತಿರುಮಲೈ ಅವರ ತೋಟದಲ್ಲಿ ಗುರುತಿಸಿರುವ ಹಲಸಿನ ಹಣ್ಣಿಗೆ ತಿರುಮಲ (ಜೆಕೆ12/24) ಎಂದು ಹೆಸರಿಡಲಾಗಿದೆ. ಅರಸಿನ ಬಣ್ಣದಿಂದ ಕೂಡಿದ ತಾಜಾ ತೋಳೆಗಳನ್ನು ಈ ಹಣ್ಣು ಒಳಗೊಂಡಿದೆ. ಇವರ ತೋಟದಲ್ಲಿದ್ದ 30 ವರ್ಷ ಹಳೆಯ ಮರದಿಂದ ಈ ಹಣ್ಣನ್ನು ಗುರುತಿಸಲಾಗಿದೆ. ಮರ ಸಾಮಾನ್ಯ ಬೆಳವಣಿಗೆ ಹೊಂದಿದ್ದು, ಹರಡಿದಂತೆ ಬೆಳೆಯುವ ಗುಣ ಹೊಂದಿದೆ.
ಈ ಹಣ್ಣು ಉದ್ದವಾದ ಆಕಾರ ಹೊಂದಿರುತ್ತದೆ. ಹಣ್ಣಿನಲ್ಲಿ ಶೇ. 45 ರಷ್ಟು ತೋಳೆಗಳು ಇರುತ್ತದೆ. ಒಂದೊAದು ತೋಳೆಯೂ 44-46 ಗ್ರಾಂ ತೂಕ ಇರುತ್ತದೆ. ತೋಳೆ 6-8ಮಿಮೀ ದಪ್ಪವಾಗಿರುತ್ತದೆ.
ಸಂಪೂರ್ಣ ಬೆಳೆದ ಮರ 450-500 ಕೆಜಿ ಹಣ್ಣು ಕೊಡುತ್ತದೆ. ಒಂದೊAದು ಹಣ್ಣು ತಲಾ 10-12 ಕೆಜಿ ತೂಕ ಇರುತ್ತದೆ.
ಪಿ. ಹರಿದಾಸ್ ಮತ್ತು ವಿ. ತಿರುಮಲೈ ಅವರ ತೋಟದಲ್ಲಿ ಗುರುತಿಸಿ ಅಭಿವೃದ್ಧಿಪಡಿಸಲಾದ ಹಲಸಿನ ಹಣ್ಣನ್ನು ಕೇಂದ್ರ ಸರ್ಕಾರ ರೂಪಿಸಿರುವ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ಅಡಿ ನೋಂದಾಯಿಸಲಾಗಿದ್ದು, ಕೊಡಗಿನ ಕುಶಾಲನಗರ ತಾಲೂಕು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಲ್ಲಿ ಶನಿವಾರ ನಡೆದ ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ, ಹಣ್ಣುಗಳ ವೈವಿದ್ಯತಾ ಮೇಳ ಹಾಗೂ ಮ್ಯಾಂಗೋಸ್ಟೀನ್ ಮತ್ತು ರಾಂಬುಟಾನ್ ಹಣ್ಣಿನ ಕ್ಷೇತ್ರೋತ್ಸವದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು. ಈ ಹಣ್ಣುಗಳಿಗೆ ಈಗ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ಅಡಿ ರಕ್ಷಣೆ ಸಿಕ್ಕಿದ್ದು, ಇದರ ವಾಣಿಜ್ಯ ಬಳಕೆಯಲ್ಲಿ ಈ ಇಬ್ಬರು ಕೃಷಿಕರು ಕೂಡ ಪಾಲುದಾರರಾಗಿರುತ್ತಾರೆ. ಈ ಹಣ್ಣಿನ ಗಿಡಗಳ ಮಾರಾಟದಿಂದ ಬರುವ ಲಾಭಾಂಶದಲ್ಲಿ ಈ ಇಬ್ಬರಿಗೂ ಪಾಲು ಸಿಗುತ್ತದೆ.
ಹರಿಗೋಲ್ಡ್ (ಜೆಕೆ 2/24) ಮತ್ತು ತಿರುಮಲ (ಜೆಕೆ12/24) ತಳಿಯ ಹಲಸಿನ ಹಣ್ಣುಗಳನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಗುರುತಿಸಿ ಅಭಿವೃದ್ಧಿ ಪಡಿಸಿದ್ದಾರೆ. ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ಪ್ರಕಾರ ಮೂಲ ಮರದ ಮಾಲೀಕರ ಹೆಸರನ್ನೇ ತಳಿಗಳಿಗೆ ಇಟ್ಟು ಪ್ರಮಾಣ ಪತ್ರ ನೀಡಲಾಗಿದೆ. ಹಣ್ಣಿನ ವಾಣಿಜ್ಯ ಬಳಕೆಯಲ್ಲಿ ಅವರೂ ಪಾಲುದಾರರಾಗಿರುತ್ತಾರೆ.
ಡಾ. ಟಿ.ಕೆ. ಬೆಹ್ರಾ, ನಿರ್ದೇಶಕ, ಐಸಿಎಆರ್, ಐಐಹೆಚ್‌ಆರ್, ಬೆಂಗಳೂರು