ಗೃಹಲಕ್ಷ್ಮೀಗೆ 2 ಲಕ್ಷ ಕುಟುಂಬಗಳು ನೋಂದಣಿ

2 lakh families registered for Grilahkshmi
ಕೆಜಿಎಫ್​ ನಗರಸಭೆಯ ಗೃಹಲಕ್ಷ್ಮೀ ಕೇಂದ್ರಕ್ಕೆ ಡಿಸಿ ಅಕ್ರಂಪಾಷಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಪೌರಾಯುಕ್ತ ಪವನ್​ಕುಮಾರ್​, ಎಇಇ ಮಂಜುನಾಥ್​, ಜೆಇ ಶಿವರಾಂ ಇದ್ದರು.
Published on

ಕೆಜಿಎಫ್​: ಗೃಹಲಕ್ಷ್ಮೀ ನೋಂದಣಿಯಲ್ಲಿ ಕೋಲಾರ ಜಿಲ್ಲೆಯು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಒಟ್ಟು 3.26 ಲಕ್ಷ ಕುಟುಂಬಗಳಲ್ಲಿ ಇದುವರೆಗೆ 2 ಲಕ್ಷ ಕುಟುಂಬಗಳು ನೋಂದಣಿ ಮಾಡುವ ಮೂಲಕ ಶೇ.66 ಪ್ರಗತಿ ಸಾಧಿಸಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.
ನಗರಸಭಾ ಕಾರ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಗೃಹಲಕ್ಷಿ$್ಮ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲೆಲ್ಲ ಈಗಾಗಲೇ ಬಹುತೇಕ ನೋಂದಣಿ ಕಾರ್ಯ ಪೂರ್ಣಗೊಂಡಿದ್ದು, ಪುರಸಭೆ, ನಗರಸಭೆಗಳಲ್ಲಿ ನೋಂದಣಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದರು.
ನಿವೇಶನಗಳ ಅಂತಿಮ ನಕ್ಷೆ ಶ್ರೀಘ್ರ ವಿಲೇ: ಆಶ್ರಯ ಬಡಾವಣೆಯಲ್ಲಿ 14 ಎಕರೆ ಪ್ರದೇಶದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡಿರುವ 456 ನಿವೇಶನಗಳು ಅಂತಿಮ ನೆ ಅನುಮೋದನೆ ಹಂತದಲ್ಲಿದ್ದು, ಅದನ್ನು ತ್ವರಿತವಾಗಿ ವಿಲೇ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಪೌರ ಕಾರ್ಮಿಕರಿಗೆ ಕೂಡಲೇ ಮನೆ ಹಸ್ತಾಂತರವಾಗಲಿ: ಗೃಹಭಾಗ್ಯ ಯೋಜನೆಯಡಿ ಯಲ್ಲಿ ಪೌರ ಕಾರ್ಮಿಕರಿಗೆ ನಿರ್ಮಿಸಿರುವ 60 ಮನೆಗಳು ಕೂಡಲೇ ಅರ್ಹ ಫಲಾನುಭವಿಗಳಿಗೆ ಹಸ್ತಾಂತರವಾಗಬೇಕಿದೆ. ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ ಅನುದಾನ ಬಿಡುಗಡೆ ಆಗದೇ ಇದ್ದುದರಿಂದ ಎರಡು ವರ್ಷಗಳಿಂದ ಗುತ್ತಿಗೆದಾರರು ಇನ್ನೂ ಸುಮಾರು 10 ರಿಂದ 15 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿರಲಿಲ್ಲ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಕೂಡಲೇ ಆಶ್ರಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ, ತಡೆಹಿಡಿದಿರುವ ಅನುದಾನ ಬಿಡುಗಡೆಗೊಳಿಸುವಂತೆ ಮಾತುಕತೆ ನಡೆಸಿ, ರಸ್ತೆ, ಚರಂಡಿ ಸೇರಿ ಮೂಲಸೌಲಭ್ಯಗಳನ್ನು ಆಶ್ರಯ ಬಡಾವಣೆಗೆ ತ್ವರಿತವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಾಹನ ಹರಾಜಿಗೆ ಟೆಂಡರ್​: ನಗರಸಭೆ ಆವರಣದಲ್ಲಿ ತುಕ್ಕು ಹಿಡಿದು ನಿಂತಿರುವ ಮೂರು ಚಕ್ರದ ಆಲ್ಫಾ 4 ಗಾಡಿಗಳು ಮತ್ತು ನಾಲ್ಕು ಚಕ್ರದ ಮಹೀಂದ್ರಾ 5 ಗಾಡಿಗಳ ವಿಲೇವಾರಿಗೆ ಟೆಂಡರ್​ ಕರೆಯಲಾಗಿದ್ದು, ಜು.31ಕ್ಕೆ ಆನ್​ಲೈನ್​ ಮೂಲಕ ಹರಾಜುದಾರರು ಅರ್ಜಿಗಳನ್ನು ಹಾಕಿಕೊಳ್ಳಬಹುದಾಗಿದ್ದು, ಹರಾಜು ಪ್ರಕ್ರಿಯೆ ಆಗಸ್ಟ್​ ಒಂದರಿಂದ ನಾಲ್ಕನೇ ತಾರೀಖಿನವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೂಲದಲ್ಲಿಯೇ ಹಸಿ, ಒಣ ಕಸ ವಿಂಗಡಿಸಿ: ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಚರಂಡಿ ಹಾಗೂ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಹಾಗೆ ನಿಲ್ಲುವ ಕಡೆಗಳಲ್ಲಿ ಕೂಡಲೇ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸ್ವಚ್ಛತೆ ಕಾಪಾಡಲು ಹಸಿ ಮತ್ತು ಒಣ ಕಸವನ್ನು ಮೂಲದಲ್ಲಿಯೇ ವಿಂಗಡಣೆ ಮಾಡಲು ಪ್ರತಿ ಮನೆ ಮನೆಗೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಜಯವಾಣಿ ವರದಿ ಗಮನಿಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಕೆಜಿಎಫ್​ ನಗರದ ಉರಿಗಾಂಪೇಟೆ ರಸ್ತೆಯು ಸಂಪೂರ್ಣ ಹದಗೆಟ್ಟು, ಕೆಸರು ಗದ್ದೆಯಂತಾಗಿತ್ತು. ಈ ಸಮಸ್ಯೆ ಕುರಿತಂತೆ ವಿಜಯವಾಣಿ ಪತ್ರಿಕೆಯು ಶುಕ್ರವಾರ ವರದಿ ಪ್ರಕಟಿಸಿ, ಸಂಬಂಧಪಟ್ಟವರನ್ನು ಗಮನಸೆಳೆಯಲಾಗಿತ್ತು.
ಈ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಕೂಡಲೇ ಆಸ್ಪಾಲ್ಟಿಂಗ್​ ಕಾಮಗಾರಿ ಪ್ರಾರಂಭಿಸಿ ಮುಂದಿನ ಬುಧವಾರದೊಳಗೆ ರಸ್ತೆ ಡಾಂಬರೀಕರಣವನ್ನು ಮುಗಿಸುವಂತೆ ತಾಕೀತು ಮಾಡಿದರು. ಇದಲ್ಲದೇ ಕಳೆದ ತಿಂಗಳ 21ರಂದು ಉರಿಗಾಂಪೇಟೆಯ ತಗ್ಗುಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ, ಮೇಲಿನಿಂದ ನೀರು ಹರಿಯುವ ಜಾಗದಲ್ಲಿ ಬ್ರಾಂಚ್​​ ಕೆನಾಲ್​ ನಿರ್ಮಿಸಲು ನಗರಸಭಾ ಇಂಜಿನಿಯರ್​ಗೆ ನಿರ್ದೇಶಿಸಿದರು.

ಗಣಿ ಕಾರ್ಮಿಕರಿಗೆ ಮನೆ ಮಂಜೂರು ಮಾಡಿ

ಕೆಜಿಎಫ್​​: ಬಿಜಿಎಂಎಲ್​ ಸಂಸ್ಥೆಯು ಎಸ್​ಟಿಬಿಪಿ ನೌಕರರಿಗೆ ನೀಡಿರುವ ಜಾಗವನ್ನು ಅವರ ಹೆಸರಿಗೇ ಅತ್ಯಂತ ಕಡಿಮೆ ವೆಚ್ಚದಲ್ಲಿ ನೋಂದಣಿ ಮಾಡಿಕೊಡುವಂತೆ ಹೈಕೋರ್ಟ್​ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಶಾಸಕಿ
ಎಂ.ರೂಪಕಲಾ ಹೇಳಿದರು.
ನಗರದ ಬಿಜಿಎಂಎಲ್​ನ ಸ್ವರ್ಣಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗಣಿ ಕಾರ್ಮಿಕರಿಗೆ ಕೋರ್ಟ್​ ನಿರ್ದೇಶನದಂತೆ ಮನೆಗಳನ್ನು ಮಂಜೂರು ಮಾಡುವುದಾದರೆ 200 ಎಕರೆ ಜಾಗವನ್ನು ಒಂದೇ ಜಾಗದಲ್ಲಿ ನೀಡಿ, ರಾಜ್ಯ ಸರ್ಕಾರ, ನಗರಸಭೆ ವತಿಯಿಂದ ನಾವು ಮೂಲಸೌಲಭ್ಯಗಳನ್ನು ನಾವು ನೀಡುತ್ತೇವೆ, ಗಣಿಯಲ್ಲಿ ಸುಮಾರು 2&3 ತಲೆಮಾರುಗಳವರು ದುಡಿದಿರುವುದರಿಂದ ಅವರ ಗೌರವಕ್ಕಾಗಿ ಒಂದೆಡೆ ಜಾಗವನ್ನು ನೀಡುವಂತೆ ಒತ್ತಾಯಿಸಿದರು.
ಚಿನ್ನದ ಗಣಿ ಪ್ರದೇಶದ ವ್ಯಾಪ್ತಿಗೆ ಸುಮಾರು 12 ಸಾವಿರ ಎಕರೆಗಿಂತಲೂ ಹೆಚ್ಚಿನ ಜಾಗ ಸೇರುವುದರಿಂದ ಇದರಲ್ಲಿ 200 ಎಕರೆ ಜಾಗವನ್ನು ಮೀಸಲಿರಿಸಿದಲ್ಲಿ, 30x40 ಅಳತೆಯ ಸುಮಾರು 8 ರಿಂದ 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಬಹುದಾಗಿದೆ. ನಗರಸಭೆ ವತಿಯಿಂದ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್​ ದೀಪಗಳು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬಹುದಾಗಿದೆ. ಇದನ್ನು ಹೊರತುಪಡಿಸಿ ಅವರು ಕಟ್ಟಿಕೊಂಡಿರುವ ಜಾಗಕ್ಕೇ ಹಕ್ಕುಪತ್ರ ನೀಡಿದಲ್ಲಿ ಈ ಮನೆಗಳು ಅಲ್ಲೊಂದು, ಇಲ್ಲೊಂದು ಇರುವುದರಿಂದ ಅವರಿಗೆ ಮೂಲಸೌಲಭ್ಯಗಳನ್ನು ಒದಗಿಸಲು ನಗರಸಭೆಗೂ ಕಷ್ಟವಾಗುತ್ತದೆ ಎಂದರು. ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 20X30 ಅಳತೆಯ ಮನೆಗಳನ್ನು ನೀಡಲಾಗುತ್ತದೆ. ಇದರಲ್ಲಿ ಎರಡು ಕೋಣೆಗಳು, ಒಂದು ಶೌಚಗೃಹ, ಒಂದು ಸ್ನಾನದಕೋಣೆ ಮತ್ತು ಸ್ವಲ್ಪ ಜಾಗವಾದರೂ ಇರುತ್ತದೆ. ಆದರೆ ಬಿಜಿಎಂಎಲ್​ ವತಿಯಿಂದ ಇದಕ್ಕಿಂತಲೂ ಕಡಿಮೆ ಜಾಗವನ್ನು ನೀಡಿದಲ್ಲಿ ಅಲ್ಲಿ ಅವರು ಹೇಗೆ ತಾನೆ ವಾಸಿಸಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಅಕ್ರಂಪಾಷಾ, ಪೌರಾಯುಕ್ತ ಪವನ್​ಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net