

ಆಲಮಟ್ಟಿ :ಪಶ್ಚಿಮ ಟ್ಟಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಾಲ್ ಬಹಾದುರ್ ಶಾಸ್ತ್ರಿ ಸಾಗರಕ್ಕೆ ದಿನದಿಂದ ದಿನಕ್ಕೆ ಒಳಹರಿವಿನಲ್ಲಿ ಏರಿಕೆಯಾಗುತ್ತಿದ್ದು, ಬುಧವಾರ ಜಲಾಶಯದಿಂದ 2,25,000 ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು ಕೃಷ್ಣೆಗೆ ಹರಿಬಿಡಲಾಗಿದೆ.
ಗರಿಷ್ಠ 519.60 ಮೀ.ಎತ್ತರದ ಅಣೆಕಟ್ಟೆಯಲ್ಲಿ ಬುಧವಾರ 517.53 ಮೀ.ನೀರು ಸಂಗ್ರಹವಾಗಿದೆ. ಬೆಳಗ್ಗೆ ಜಲಾಶಯಕ್ಕೆ 1,59,812 ಕ್ಯೂಸೆಕ್ ಇದ್ದ ಒಳಹರಿವು ಸಂಜೆ 1,78,528 ಕ್ಯೂಸೆಕ್ ಒಳ ಹರಿವು ಇತ್ತು. ಬೆಳಗ್ಗೆ 1,59,812 ಕ್ಯೂಸೆಕ್ ಇದ್ದ ಹೊರಹರಿವು ಸಂಜೆ 2,25,000 ಕ್ಯೂಸೆಕ್ಗೆ ಏರಿಸಲಾಯಿತು. 123.081 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 91.263 ಟಿಎಂಸಿ ಸಂಗ್ರಹವಾಗಿತ್ತು.
ಕೃಷ್ಣೆಯ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ, ಸಾತಾರಾ, ಸಾಂಗಲಿ, ಕೊಲ್ಹಾಪುರ, ರತ್ನಾಗಿರಿ ಜಿಲ್ಲೆ ಹಾಗೂ ದೂಧಗಂಗಾ, ವೇದಗಂಗಾ, ಪಂಚಗಂಗಾ ಹಾಗೂ ರಾಜ್ಯದ ಟಪ್ರಭಾ ನದಿ ಸೇರಿ ಕೃಷ್ಣಾ ನದಿಯ ಎಲ್ಲ ಉಪನದಿಗಳ ಜಲಾನಯನ ಪ್ರದೇಶಗಳಲ್ಲಿ ಅಪಾರ ಮಳೆ ಸುರಿಯಲಾರಂಭಿಸಿರುವುದರಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಮಂಗಳವಾರ ಮಹಾರಾಷ್ಟ್ರದ ಕಷ್ಣಾ ನದಿಯ ಉಗಮ ಸ್ಥಾನವಾದ ಮಹಾಬಲೇಶ್ವರದಲ್ಲಿ 157 ಎಂ.ಎಂ. ಮಳೆ, ಕೊಯ್ನಾದಲ್ಲಿ 162 ಎಂ.ಎಂ., ನೌಜಾದಲ್ಲಿ 157 ಎಂ.ಎಂ., ವಾರಣಾದಲ್ಲಿ 168 ಎಂ.ಎಂ., ಉಮೋರ್ದಿಯಲ್ಲಿ 66 ಎಂ.ಎಂ., ರಾಧಾನಗರಿಯಲ್ಲಿ 120 ಎಂ.ಎಂ., ದೂದಗಂಗಾದಲ್ಲಿ 80 ಎಂ.ಎಂ., ತರಾಲಿಯಲ್ಲಿ 183 ಎಂ.ಎಂ., ಕನ್ಹೇರನಲ್ಲಿ 35 ಎಂ.ಎಂ. ಮಳೆಯಾಗಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ 1,35,835 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ.
ನದಿ ತೀರದ ಗ್ರಾಮಗಳಲ್ಲಿ ನೆರೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಬಿಜೆಎನ್ನೆಲ್ ಮತ್ತು ಕಂದಾಯ ಅಧಿಕಾರಿಗಳು ಡಂಗುರ ಸಾರಿ ನದಿ ತೀರಕ್ಕೆ ತೆರಳದಂತೆ ರೈತರಿಗೆ ತಿಳಿವಳಿಕೆ ಹೇಳಿದ್ದಾರೆ.
ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 40 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಎಲ್ಲ ಆರು ಟಕಗಳಿಂದ 230 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಗರಿಷ್ಠ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 290 ಮೆಗಾವಾಟ್ ಇದೆ.