

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಗದಗನ ರಹಮತ್ ನಗರದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಇರುವ ಹೊಂಡದಲ್ಲಿ ನೀರು ಪಾಲಾದ ಇಬ್ಬರು ಬಾಲಕರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿಗಳ ಚೆಕ್ ಗಳನ್ನು ಮಂಗಳವಾರದಂದು ವಿತರಿಸಿದರು.
ಗದಗನ ರೆಹಮತ್ ನಗರದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಇರುವ ಹೊಂಡದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಆಗಸ್ಟ 15 ರಂದು ನಡೆದಿತ್ತು. ರೆಹಮತ ನಗರದ 12 ವರ್ಷದ ಮಹಮದ ಅಮೀನ ಹಾಗೂ 14 ವರ್ಷದ ಸಂತೋಷ ಕುಂಬಾರ ಎಂಬ ಬಾಲಕರಿಬ್ಬರು ಸಾವನ್ನಪ್ಪಿದ್ದರು.
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ಮಾನ್ಯ ಮುಖ್ಯ ಮಂತ್ರಿಗಳು ಮೃತ ಬಾಲಕರ ಕುಟುಂಬಕ್ಕೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ನೀಡುವ ಬರವಸೆ ನೀಡಿದ್ದರು. ಅಲ್ಲದೇ ಅಂದು ಮೃತ ಬಾಲಕರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಸಹ ಹೇಳಿದ್ದರು.
ಪರಿಹಾರ ಚೆಕ್ ವಿತರಣೆ ವೇಳೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ತಹಶಿಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕೃಷ್ಣ ಪರಾಪೂರ, ಪ್ರಭು ಬುರಬುರೇ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ ಸೇರಿದಂತೆ ಮತ್ತಿತರರು ಇದ್ದರು.