ಅನ್ನಭಾಗ್ಯ ಅಕ್ಕಿ 2 ಕೆಜಿ ಕಡಿತ: ರಿಯಾಯಿತಿ ದರದಲ್ಲಿ ತೊಗರಿಬೇಳೆ, ಹೆಸರು, ಶೇಂಗಾ

Ration Rce
Published on

ಕಾಳಸಂತೆಯಲ್ಲಿ ಪಡಿತರ ಧಾನ್ಯ ಮಾರಾಟ, ಅನರ್ಹ ಬಿಪಿಎಲ್ ಕಾರ್ಡ್​ದಾರರಿಂದ ಯೋಜನೆ ದುರ್ಬಳಕೆಗೆ ಕಡಿವಾಣ ಹಾಕಲು ಅನ್ನಭಾಗ್ಯ ಅಕ್ಕಿ ಪ್ರಮಾಣ 7ರಿಂದ 5 ಕೆಜಿಗೆ ಕಡಿತಗೊಳಿಸಲು ಸರ್ಕಾರ ಮುಂದಾಗಿದ್ದು, ರಿಯಾಯಿತಿ ದರದಲ್ಲಿ ಅರ್ಧ ಕೆಜಿ ತೊಗರಿಬೇಳೆ, ಹೆಸರು, ಶೇಂಗಾ ಇತರ ಧಾನ್ಯ ನೀಡಲು ನಿರ್ಧರಿಸಿದೆ.

ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್, 10.90 ಲಕ್ಷ ಅಂತ್ಯೋದಯ ಹಾಗೂ 12 ಲಕ್ಷಕ್ಕೂ ಅಧಿಕ ಎಪಿಎಲ್ ಕುಟುಂಬಗಳಿವೆ. 19,920 ನ್ಯಾಯಬೆಲೆ ಅಂಗಡಿಗಳ ಮೂಲಕ ಮಾಸಿಕ 22.64 ಲಕ್ಷ ಕ್ವಿಂಟಾಲ್​ಗೂ ಅಧಿಕ ಅಕ್ಕಿ ವಿತರಿಸಲಾಗುತ್ತಿದೆ. ಇದರಲ್ಲಿ ಶೇ.20ಕ್ಕೂ ಹೆಚ್ಚು ಪ್ರಮಾಣದ ಅಕ್ಕಿ ದುರುಪಯೋಗ ಆಗುತ್ತಿದೆ.

ಅನ್ನಭಾಗ್ಯ ಅಕ್ಕಿಯನ್ನು ಬಹುತೇಕರು ಕಾಳಸಂತೆ, ರಸ್ತೆ ಬದಿಯ ಹೋಟೆಲ್​ಗಳಿಗೆ, ವಲಸೆ ಬಂದಿರುವ ಕೂಲಿ ಕಾರ್ವಿುಕರಿಗೆ ಕೆ.ಜಿ.ಗೆ 10ರಿಂದ 15 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಲ ಪಡಿತರದಾರರು ಅನ್ನಭಾಗ್ಯ ಅಕ್ಕಿಯಿಂದಲೇ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಹೋಟೆಲ್ ನಡೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.

ಬೆಂಗಳೂರು, ಕಲಬುರಗಿ, ಬೆಳಗಾವಿ, ವಿಜಯಪುರ, ಬೀದರ್, ಹುಬ್ಬಳ್ಳಿ- ಧಾರವಾಡ, ಹಾವೇರಿ, ಮಂಡ್ಯ, ಹಾಸನ, ಮಡಿಕೇರಿ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನ್ನಭಾಗ್ಯ ಅಕ್ಕಿ ದುರುಪಯೋಗ ಆಗುತ್ತಿದೆ. ಇದರಲ್ಲಿ ನ್ಯಾಯಬೆಲೆ ಅಂಗಡಿಯವರು, ಸ್ಥಳೀಯಮಟ್ಟದ ಇಲಾಖೆ ಸಿಬ್ಬಂದಿಯೂ ಭಾಗಿಯಾಗಿದ್ದಾರೆ.

2 ಸಾವಿರ ಕ್ವಿಂ. ಅಕ್ಕಿ ಜಪ್ತಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವರ್ಷ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದ್ದ 2 ಸಾವಿರ ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು 26,850 ಲೀಟರ್ ಸೀಮೆಎಣ್ಣೆ, 2017-18ರಲ್ಲಿ 1,190 ಕ್ವಿಂಟಾಲ್ ಅಕ್ಕಿ, 98 ಕ್ವಿಂ. ಗೋಧಿ, 16,850 ಲೀ. ಸೀಮೆಎಣ್ಣೆ, 2018-19ರಲ್ಲಿ 526 ಕ್ವಿಂ. ಅಕ್ಕಿ, 90 ಕ್ವಿಂ. ಗೋಧಿ, 10,800 ಲೀ. ಸೀಮೆಎಣ್ಣೆಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆಯಲ್ಲಿ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಕಡಿತಗೊಳಿಸುವುದು, ತೊಗರಿಬೇಳೆ ಸೇರಿ ಇತರ ಧಾನ್ಯ ನೀಡುವ ಕುರಿತು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. | ಶಶಿಕಲಾ ಜೊಲ್ಲೆ ಸಚಿವೆ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net