

ಅರಕಲಗೂಡು: ತಾಲೂಕಿನ ಮಣಜೂರು ಕೆರೆಯಲ್ಲಿ ಶನಿವಾರ ಹಸುಗಳಿಗೆ ನೀರು ಕುಡಿಸಲು ಹೋದ ಸಂದರ್ಭ ಇಬ್ಬರು ಜಲ ಸಮಾಧಿಯಾಗಿದ್ದಾರೆ.
ಗ್ರಾಮದ ರವಿ (45), ಲಕ್ಷ್ಮಣ (55)ಮೃತರು. ಇಬ್ಬರೂ ಶನಿವಾರ ಕೆರೆಯಲ್ಲಿ ಹಸುಗಳಿಗೆ ನೀರು ಕುಡಿಸಲು ಮುಂದಾದಾಗ ರವಿ ನೀರಿನಲ್ಲಿ ಮುಳುಗಿದರು. ಅವರನ್ನು ರಕ್ಷಿಸಲು ಕೆರೆಗಿಳಿದ ಲಕ್ಷ್ಮಣ ಕೂಡಾ ನೀರು ಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಕಲಗೂಡು ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ ರವಿ ಅವರ ಮೃತದೇಹ ಹೊರ ತೆಗೆದಿದ್ದಾರೆ. ಲಕ್ಷ್ಮಣ ಎಂಬವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ. ರವಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಲಕ್ಷ್ಮಣ ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಮೃತರ ಕುಟುಂಬದವರ ಆಕ್ರಂದನ ಮನ ಕಲಕುವಂತಿತ್ತು.