

ಬೆಂಗಳೂರು: ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಚಂದ್ರಯಾನ -3ರ ಮಾದರಿಗಳು, ರಾತ್ರಿ ವೇಳೆ ಬಾಹ್ಯಾಕಾಶ ವೀಕ್ಷಣೆ ಸೇರಿ ಉತ್ಸವದಲ್ಲಿ ಹಲವು ವಿಶೇಷತೆ ಒಳಗೊಂಡ ಸೈನ್ಸ್ ಇನ್ ಆ್ಯಕ್ಷನ್ ಶೀರ್ಷಿಕೆಯಡಿ ‘ವಿಜ್ಞಾನೋತ್ಸವ’ ಶನಿವಾರ (ಸೆ.30) ಹಾಗೂ ಭಾನುವಾರ (ಅ.1) ಜಯನಗರ ನ್ಯಾಷನಲ್ ಕಾಲೇಜು ಆವರಣದಲ್ಲಿ ನಿಗದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಸಂಸ್ಥೆಯ ಕಾರ್ಯದರ್ಶಿ ವೆಂಕಟಶಿವಾರೆಡ್ಡಿ, ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ಹಾಗೂ ಜವಾಹರ್‌ಲಾಲ್ ನೆಹರು ತಾರಾಲಯ ಸಹಯೋಗದಡಿ ವಿಜ್ಞಾನೋತ್ಸವ ನಡೆಯಲಿದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣಕ್ಕೆ ಮೀಸಲಾದ ಕ್ರಿಯಾತ್ಮಕ ಮತ್ತು ಸಂವಾದಾತ್ಮಕ ಸಂಸ್ಥೆಯಾಗಿದೆ. ಇಲ್ಲಿ ವಸ್ತು ಸಂಗ್ರಹಾಲಯ, ಡಿಐವೈ ಪ್ರಯೋಗಾಲಯವಿದ್ದು, ಇದು ಕಲಿಕೆ ಮತ್ತು ಮನೋರಂಜನೆಯ ಕೇಂದ್ರವಾಗಿರಲಿದೆ ಎಂದಿದ್ದಾರೆ.
ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಭಾರತಿ ರಾವ್ ಮಾತನಾಡಿ, ಇಸ್ರೋ, ಇನ್ನೋವೇಷನ್ ಆ್ಯಂಡ್ ಸೈನ್ಸ್ ಪ್ರಮೋಷನ್ ಫೌಂಡೇಷನ್, ಪರಂ ಇನ್ನೋವೇಷನ್ ಸೈನ್ಸ್ ಎಕ್ಸ್ ಪೀರಿಯನ್ಸ್ ಸೆಂಟರ್, ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಅಗಸ್ತಯ ಅಂತಾರಾಷ್ಟ್ರೀಯ ಸಂಸ್ಥೆಗಳು ಸಹಭಾಗಿತ್ವವನ್ನು ಹೊಂದಿವೆ ಎಂದಿದ್ದಾರೆ.
ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ:
ವಿಜ್ಞಾನೋತ್ಸವದಲ್ಲಿ 8,000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕುರಿತು ಆಸಕ್ತಿ ಮೂಡಿಸಲು ಸಹಕಾರಿಯಾಗಲಿದೆ. ಮಾನವ ಆಕೃತಿಯ ರೋಬೋಟ್‌ಗಳು, ವಿಜ್ಞಾನದ ಮೂಲ ಸೂತ್ರಗಳ ಆಧಾರಿತ ಮಾದರಿ, ಚಂದ್ರಯಾನ -3ರ ವಾಸ್ತವಿಕ ಮಾದರಿ, ರಾತ್ರಿ ವೇಳೆಯಲ್ಲಿ ಬಾಹ್ಯಾಕಾಶ ವೀಕ್ಷಣೆ ಸೇರಿದಂತೆ ಹಲವಾರು ಆಕರ್ಷಣೆಗಳಿರುತ್ತವೆ.