ಹಿರಿಯ ನಾಗರಿಕರಿಗೆ ೨ ಕೋಟಿ ರೂ. ವಂಚನೆ

2 crores for senior citizens. Fraud
Published on

ಮಡಿಕೇರಿ:

ವಿರಾಜಪೇಟೆ ತಾಲೂಕು ಕರಡಿಗೋಡು ಗ್ರಾಮದ ಹಿರಿಯ ನಾಗರಿಕರೊಬ್ಬರನ್ನು ಕೊರಿಯರ್ ಸಂಸ್ಥೆ ಹೆಸರು ಹೇಳಿಕೊಂಡು ೨ ಕೋಟಿ ರೂ. ವಂಚಿಸಲಾಗಿದೆ. ಈ ತಿಂಗಳ ೧೧ರಂದು ಇವರ ಮೊಬೈಲ್ ನಂಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಫೆಡೆಕ್ಸ್ ಕಂಪನಿಯ ಕೆಲಸಗಾರ ಎಂದು ಹೇಳಿ, ’ನಿಮ್ಮ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಇರುವುದರಿಂದ ಪಾರ್ಸೆಲ್ ಸೀಜ್ ಆಗಿದೆ. ಈ ಬಗ್ಗೆ ಕ್ರೈಂ ಪೊಲೀಸರೊಂದಿಗೆ ಮಾತನಾಡಿಸಿ ಪ್ರಕರಣ ದಾಖಲಾಗುವುದನ್ನು ತಪ್ಪಿಸಲು ಹಣ ನೀಡಬೇಕಾಗಿದೆ,’ ಎಂದು ನಂಬಿಸಿದ್ದಾನೆ. ಈತನ ಮಾತನ್ನು ನಂಬಿ ಇವನು ಹೇಳಿದ ಬ್ಯಾಂಕ್ ಖಾತೆಗಳಿಗೆ ಎರಡು ಹಂತದಲ್ಲಿ ಒಟ್ಟು ೨,೨೧,೪೦,೦೦೦ ಹಣವನ್ನು ಹಿರಿಯ ನಾಗರಿಕರು ವರ್ಗಾ ಮಾಡಿದ್ದಾರೆ. ನಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಸಹಾ ನೀಡುವಂತೆ ಆತ ಕರೆ ಮಾಡಿ ಕೇಳಿದ್ದರಿಂದ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಮೇ ೨೮ಕ್ಕೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರಿಗೆ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಮಾದಕ ವಸ್ತು ಸಾಗಾಟ ಅಥವಾ ಇತರ ಪ್ರಕರಣಗಳಲ್ಲಿ ಆರೋಪಿಯನ್ನಾಗಿ ಮಾಡುವ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಿ ಬೆದರಿಸಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುತ್ತಿರುವ ಹಲವು ಪ್ರಕರಣಗಳು ವರದಿಯಾಗುತ್ತಿದೆ. ಈ ರೀತಿಯ ಬೆದರಿಕೆ ಕರೆಗಳು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಥವಾ ತುರ್ತು ದೂರವಾಣಿ ಸಂಖ್ಯೆ ೧೧೨ಕ್ಕೆ ಕರೆ ಮಾಡಿ ಮಾಹಿತಿ ನೀಡಲು ಪೊಲೀಸರು ಕೊರಿದ್ದಾರೆ. ಯಾವುದೇ ರೀತಿಯಿಂದ ಬ್ಯಾಂಕ್ ಖಾತೆಯಿಂದ ಆನ್ ಲೈನ್ ಹಣಕಾಸು ವರ್ಗಾವಣೆಯಾಗಿ ವಂಚನೆಗೆ ಒಳಗಾಗಿರುವುದು ಕಂಡುಬಂದಲ್ಲಿ ಕೂಡಲೇ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ ೧೯೩೦ ಕ್ಕೆ ಕರೆಮಾಡಿ ಮಾಹಿತಿ ನೀಡಿ ಬ್ಯಾಂಕ್ ಖಾತೆಗಳಿಂದ ವರ್ಗಾವಣೆಯಾದ ಹಣವನ್ನು ತಡೆಹಿಡಿಯಲು ಕ್ರಮ ಕೈಗೊಂಡು ನಂತರ ಸಮೀಪದ ಪೊಲೀಸ್ ಠಾಣೆ ಅಥವಾ ಜಿಲ್ಲೆಯ ಸೈಬರ್ ಅಪರಾಧ ವಿಶೇಷ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net