

ಕೆಜಿಎಫ್- ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ಇಲಾಖೆಯು ನಗರದ ಕುವೆಂಪು ಬಸ್ ನಿಲ್ದಾಣದ ನವೀಕರಣ ಕಾಮಗಾರಿ ಹಾಗೂ ಉನ್ನತಿಕರಣ ಕಾಮಗಾರಿಗಾಗಿ 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದು ನಗರಸಭೆ ಪ್ರಭಾರಿ ಪೌರಾಯುಕ್ತ ಮಂಜುನಾಥ್ ಹೇಳಿದರು.
ನಗರದ ಕುವೆಂಪು ಬಸ್ ನಿಲ್ದಾಣಕ್ಕೆ ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿ ಹಾಗೂ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದ ಅವರು, ಕುವೆಂಪು ಬಸ್ ನಿಲ್ದಾಣದಲ್ಲಿ ಕೈಗೊಳ್ಳಬೇಕಾದ ಮೂಲ ಸೌಕರ್ಯಗಳನ್ನು ಪರಿಶೀಲನೆ ನಡೆಸಲು ಆಗಮಿಸಿದ್ದು, 2 ಕೋಟಿ ರೂ. ಅನುದಾನದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಕುವೆಂಪು ಬಸ್ ನಿಲ್ದಾಣದಲ್ಲಿ ಶೌಚಗೃಹ ಅಭಿವೃದ್ಧಿ ಹಾಗೂ ನೆಲಹಾಸು, ಕಂಬಗಳಿಗೆ ಹೊಸ ಸ್ಪರ್ಶ, ಚರಂಡಿ ವ್ಯವಸ್ಥೆ ಕಲ್ಪಿಸಲು ಪಟ್ಟಿ ನೀಡಲಾಗಿದ್ದು, ಶೀಘ್ರ ಡಿಪಿಆರ್ ಮಾಡುವ ಮೂಲಕ ಟೆಂಡರ್ ಪ್ರಕ್ರಿಯೆಗಳು ನಡೆಯಲಿದೆ ಎಂದರು.